

ಹಾಸನ: ಬಳಕೆ ಮಾಡಿದ ನಂತರ ಮೂಲೆಯಲ್ಲಿಟ್ಟುರುವ ವಸ್ತುಗಳನ್ನು ನಾವು ಸ್ಥಾಪಿಸಲಾಗಿರುವ ಆರ್‌ಆರ್‌ಆರ್ ಕೇಂದ್ರದ ತ್ಯಾಜ್ಯದ ಡಬ್ಬಿಗಳಿಗೆ ಹಾಕಿದರೇ ಆ ತ್ಯಾಜ್ಯ ಮರುಬಳಕೆ ಮಾಡಲು ಯೋಗ್ಯವಾಗಿದ್ದರೇ ಉಪಯೋಗಿಸಲಾಗುವುದು. ಇಲ್ಲವಾದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ನಗರಸಭೆ ಆಯುಕ್ತರಾದ ಸತೀಶ್ ಕುಮಾರ್ ತಿಳಿಸಿದರು.
ನಗರದ ಕಟ್ಟಿನಕೆರೆ ಮಾರುಕಟ್ಟೆಯ ಮುಖ್ಯರಸ್ತೆಯ ಬಳಿ ಬಾಳೆಹಣ್ಣು ವರ್ತಕರ ಸಂಘ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮದಡಿ ಆರ್.ಆರ್.ಆರ್. ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಮಕ್ಕಳು ಆಟವಾಡುವ ಆಟಿಕೆ ವಸ್ತುಗಳು ಬೇಡವಾದಗ ಅವುಗಳನ್ನು ಮೂಲೆಯಲ್ಲಿ ಎಸೆಯುವ ಬದಲು ನಾವು ಅದನ್ನು ಬೇರೆಯವರಿಗೆ ತಲುಪಿಸಿ ಸಂತೋಷ ಪಡಿಸಬಹುದು. ಆಟಿಕೆ ವಸ್ತುಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಹಳೆಯ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು ಹೀಗೆ ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.
ನೀವು ಕೊಡುವ ಅನುಪಯುಕ್ತ ವಸ್ತುಗಳನ್ನು ಬಡವರಿಗೆ, ಅನಾಥ ಆಶ್ರಮಗಳಿಗೆ ಕೊಡಲಾಗುವುದು. ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಛತೆ ಕಾಪಾಡಿ ಉತ್ತಮ ಪರಿಸರ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಬಾಟಲು, ಎಲೆಕ್ಟ್ರಾನಿಕ್ಸ್ ಉಪಕರಣ, ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ಇತರೆ ಎಲ್ಲಾ ಪದಾರ್ಥಗಳನ್ನು ನಾವು ಸ್ಥಾಪನೆ ಮಾಡಿರುವ ಸಂಗ್ರಹ ಕೇಂದ್ರಕ್ಕೆ ತಂದು ಕೊಡಬಹುದಾಗಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಲು ಇಂತಹ ಕೇಂದ್ರ ಸಹಕಾರಿ ಆಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಮಾತನಾಡಿ, ಸರ್ಕಾರ ಆರ್.ಆರ್.ಆರ್. ಕೇಂದ್ರದ ಮೂಲಕ ಇಡೀ ದೇಶದಾದ್ಯಂತ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ನಿರುಪಯುಕ್ತ ವಸ್ತುಗಳನ್ನು ಮತ್ತು ಮರು ಬಳಕೆ ಮಾಡುವ ವಸ್ತುಗಳನ್ನು ಈ ಕೇಂದ್ರಕ್ಕೆ ತಂದು ಕೊಡಬಹುದು. ಸಾರ್ವಜನಿಕರು ಸಹಕರಿಸಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಳೆಹಣ್ಣು ವರ್ತಕರ ಸಂಘದ ಕಾರ್ಯದರ್ಶಿ ಫೈರೋಜ್ ಅಹಮದ್, ಉಪಾಧ್ಯಕ್ಷ ಅಬ್ದೂಲ್ ಕರಿಂ, ಖಜಾಂಚಿ ಕೆ. ಅನಂತರಾಮು, ಎಂ. ಪದ್ಮಾ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.