ಆರ್.ಧ್ರುವನಾರಾಯಣಗೆ ಶ್ರದ್ಧಾಂಜಲಿ

11 HANUR 2
ಹನೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು. ಚಿಕ್ಕತಮ್ಮಯ್ಯ, ಜಯಪ್ರಕಾಶ್ ಗುಪ್ತ, ಗಿರೀಶ್, ಬಸವರಾಜು, ಸುದೇಶ್, ಇತರರು ಇದ್ದರು.
Published on

ಹನೂರು: ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರಿಗೆ ಶನಿವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಕಾಂಗ್ರೆಸ್ ಹಿರಿಯ ಮುಖಂಡ ಚಿಕ್ಕತಮ್ಮಯ್ಯ ಮಾತನಾಡಿ, ಚಾ.ನಗರ ಹಾಗೂ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದ ಧ್ರುವನಾರಾಯಣ ಅವರು ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಮಾನವೀಯ ಮೌಲ್ಯಗಳನ್ನು ಮೈಗೂಢಿಸಿಕೊಂಡಿದ್ದರು. ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ರಾಜಕೀಯ ವಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ತಮ್ಮದೇಯಾದ ಛಾಪನ್ನು ಮೂಡಿಸಿದ್ದರು ಎಂದರು.

ಚಾ.ನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಅದರಲ್ಲೂ ಹನೂರು ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಈ ದಿಸೆಯಲ್ಲಿ ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ಇದರಿಂದ ಈ ಭಾಗದಲ್ಲಿ ಹೆಚ್ಚಾಗಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದರು. ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಇವರು ಕೈಗೊಂಡ ಕಾರ್ಯಗಳಿಂದಾಗಿ ದೇಶದ 5ನೇ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಲ್ಲದೆ ರಾಜ್ಯದ ನಂ.1 ಸಂಸದರಾಗಿ ಖ್ಯಾತಿ ಗಳಿಸಿದ್ದರು. ಪಕ್ಷದ ಸಂಘಟನೆಗೆ ಇವರ ಪಾತ್ರ ಹಿರಿದು. ಆದರೆ ನಮ್ಮನ್ನೆಲ್ಲ ಅಗಲಿರುವುದು ತುಂಬ ನೋವಿನ ಸಂಗತಿ. ಇದರಿಂದ ರಾಜ್ಯಕ್ಕೆ, ಕುಟುಂಬಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷ ಗಿರೀಶ್, ಮಾಜಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಹರೀಶ್‌ಕುಮಾರ್, ಸುದೇಶ್, ಸೋಮಶೇಖರ್, ಟೌನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್, ಮುಖಂಡರಾದ ಜಯಪ್ರಕಾಶ್ ಗುಪ್ತ, ಮಹೇಶ್, ನಟರಾಜು, ಮಾದೇಶ್, ರಾಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net