ಆರೋಪಿಯನ್ನು ಹಿಡಿಯಲು ಹೋಗಿ ಬಾವಿಗೆ ಬಿದ್ದ ಅಬಕಾರಿ ಗಾರ್ಡ್​

Thief
Published on

ಬಸವಕಲ್ಯಾಣ: ಉಜಳಂಬ ವಾಡಿ ಬಳಿ ಮಹಾರಾಷ್ಟ್ರದಿಂದ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಬೆನ್ನಟ್ಟಿದ ಅಬಕಾರಿ ಇಲಾಖೆ ಗಾರ್ಡ್​ ಒಬ್ಬರು ಬಾವಿಗೆ ಬಿದ್ದು ಗಾಯಗೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆತ ಗಾರ್ಡ್​ ರವಿ ಅವರನ್ನು ನೂಕಿ ಕತ್ತಲಲ್ಲಿ ಓಡಲು ಆರಂಭಿಸಿದ. ರವಿ ಬೆನ್ನಟ್ಟುವಾಗ 15 ಅಡಿಗೂ ಹೆಚ್ಚು ಆಳದ ಬಾವಿಗೆ ಬಿದ್ದಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ರವಿಗಾಗಿ ಹುಡುಕಾಟ ನಡೆಸಿದಾಗ ಬಾವಿಗೆ ಬಿದ್ದಿದ್ದು ಕಂಡಿದೆ. ತಕ್ಷಣವೇ ಮೇಲೆತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆನ್ನು ಮತ್ತು ಸೊಂಟ ಭಾಗದಲ್ಲಿ ಒಳಪೆಟ್ಟಾಗಿದ್ದು, ಚಿಕಿತ್ಸೆ ನೀಡಿ ಡಿಸ್ಚಾರ್ಜ್​ ಮಾಡಲಾಗಿದೆ.
ಅಬಕಾರಿ ನಿರೀಕ್ಷಕ ಜಾಫರ್ ಪ್ರಕರಣ ದಾಖಲಿಸಿದ್ದು, 7.56 ಲೀಟರ್ ಅಕ್ರಮ ಮದ್ಯ ಸಮೇತ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಇಲಾಖೆ ಇನ್ಸ್ಪೆಕ್ಟರ್ ಜಾಫರ್ಮಿಯಾ ನೇತೃತ್ವದಲ್ಲಿ ಉಪನಿರೀಕ್ಷಕರಾದ ರವಿ ಪಾಟೀಲ್, ಶಿವಯ್ಯ ಜಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net