ಆರೋಪಿತರ ಮನೆಗಳಲ್ಲಿ ಮಹಜರು

CTD----
Published on

ಚಿತ್ರದುರ್ಗ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು, ಚಿತ್ರದುರ್ಗದಲ್ಲಿ ಭಾನುವಾರ ಸ್ಥಳ ಮಹಜರು ನಡೆಸಿದರು.
ಆರೋಪಿ ರಾಘವೇಂದ್ರನೊಂದಿಗೆ ಕಳೆದ ಶುಕ್ರವಾರ ನಸುಕಿನಲ್ಲಿ ಬಂದಿದ್ದ ಪೊಲೀಸರು, ಅಂದು ನಗರದ ಚಳ್ಳಕೆರೆ ಗೇಟ್ ಹಾಗೂ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಮಹಜರು ನಡೆಸಿ ಬೆಂಗಳೂರಿಗೆ ಹಿಂತಿರುಗಿದ್ದರು. ಗುರುವಾರ ಸ್ಥಳೀಯ ಪೊಲೀಸರಿಗೆ ಶರಣಾಗಿದ್ದ ರವಿಯೊಂದಿಗೆ ಆರೋಪಿಗಳಾದ ಅನಿಲ್‌ಕುಮಾರ್ ಮತ್ತು ಜಗದೀಶ್ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದ ಬಳಿಕ ನಾಲ್ವರನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.
ತಂದೆ ಚಂದ್ರಪ್ಪ ಅಂತ್ಯಕ್ರಿಯಲ್ಲಿ ಪಾಲ್ಗೊಳ್ಳಲು ಆರೋಪಿ ಅನು ಜತೆಗೆ ದುರ್ಗದ ಇತರ ಮೂವರನ್ನು ಸಹ ಶನಿವಾರ ರಾತ್ರಿ ನಗರಕ್ಕೆ ಕರೆದುಕೊಂಡು ಬಂದಿದ್ದರು. ಅಂತ್ಯಕ್ರಿಯೆ ಬಳಿಕ ಎಲ್ಲರನ್ನೂ ನಗರದ ಖಾಸಗಿ ಹೋಟೆಲ್‌ನಲ್ಲಿ ಉಳಿಸಿದ್ದರು.
ಭಾನುವಾರ ಬೆಳಗ್ಗೆ 11ರ ಸಮಯದಲ್ಲಿ ಹೋಟೆಲ್‌ನಿಂದ ಹೊರಟ ಪೊಲೀಸ್ ತಂಡ, ರಾಘವೇಂದ್ರ ಬಾಡಿಗೆ ಇದ್ದ ಮೆದೇಹಳ್ಳಿಯ ಮನೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಮಹಜರು ನಡೆಸಿತು. ಬಳಿಕ ಐಯ್ಯನಹಳ್ಳಿ ಕುರುಬರಹಟ್ಟಿಯಲ್ಲಿರುವ ರವಿ ಮನೆಗೆ ತೆರಳಿ, ಆತನ ಇಟಿಎಸ್ ಕಾರನ್ನು ಸೀಜ್ ಮಾಡಿದರು. ಅಲ್ಲೂ ಕೂಡ ಎರಡು ತಾಸಿಗೂ ಅಧಿಕ ಕಾಲ ಪರಿಶೀಲನೆ ನಡೆಸಿದರು.
ಜೂ.8ರಂದು ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ಯಲು ಬಳಸಿದ್ದ ಕಾರು ಹಾಗೂ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಸಿದ್ಧವಾಗಿದ್ದ ಈ ಕಾರಿನ ಬಳಿಗೆ ಕರೆದೊಯ್ಯಲು ಮತ್ತೊಬ್ಬ ಆರೋಪಿ ಜಗದೀಶ್ ಆಟೋವನ್ನು ಬಳಸಲಾಗಿತ್ತು. ದುರ್ಗಕ್ಕೆ ಜೂ.9ರಂದು ವಾಪಸ್ ಬಂದಿದ್ದ ಕಾರು ಮತ್ತೆ ಬಾಡಿಗೆಗೆ ಹೋಗಿತ್ತು. ಇದರಿಂದಾಗಿ ಅದರಲ್ಲಿರಬಹುದಾಗಿದ್ದ ಸಾಕ್ಷಾೃಧಾರಗಳ ಸಂಗ್ರಹ ಪೊಲೀಸರಿಗೆ ಕಠಿಣವೆನಿಸಿದೆ.
ಐಯ್ಯನಹಳ್ಳಿ ಕುರುಬರಹಟ್ಟಿಯ ಜಗ್ಗನ ಮನೆಯಲ್ಲಿ ಆಟೋ ಕೂಡ ಸೀಜ್ ಆಗಿದೆ. ಜಗ್ಗನ ಕುಟುಂಬದ ಸದಸ್ಯರಿಂದ ಮಾಹಿತಿ ಹಾಗೂ ಬೆರಳಚ್ಚು ತಜ್ಞರು ಸೀಜ್ ಆದ ವಾಹನಗಳಲ್ಲಿ ಸಾಕ್ಷಾೃಧಾರಗಳ ಸಂಗ್ರಹಕ್ಕೆ ಪ್ರಯತ್ನಿಸಿದರೆನ್ನಲಾಗಿದೆ. ನಗರದ ಸಿಹಿನೀರು ಹೊಂಡ ಏರಿಯಾದಲ್ಲಿರುವ ಅನು ಮನೆಯಲ್ಲೂ ಮಹಜರು ಪ್ರಕ್ರಿಯೆ ನಡೆಯಿತು.
ಬೆಂಗಳೂರು ಕಾಮಾಕ್ಷಿಪಾಳ್ಯ ಠಾಣೆ ಸಿಪಿಐ ಸುಬ್ರಮಣ್ಯ, ಪಿಎಸ್‌ಐ ತಿಪ್ಪೇಸ್ವಾಮಿ ನೇತೃತ್ವದ ತಂಡ ಸೆಕ್ಷನ್ 27 ಎವಿಡೆನ್ಸ್ ಆ್ಯಕ್ಟ್ ಅಡಿ ಆರೋಪಿತರ ಹೇಳಿಕೆ ಆಧರಿಸಿ ಸ್ಥಳ ಮಹಜರು ನಡೆಸಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಕೊಟ್ಟಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ನಗದು ವಶಕ್ಕೆ ಪೊಲೀಸರು ಶೋಧ ನಡೆಸಿದ್ದಾರೆಂದು ಗೊತ್ತಾಗಿದ್ದು, ಮಹಜರ್ ಬಳಿಕ ತಂಡ ಬೆಂಗಳೂರಿಗೆ ತೆರಳಿತು.

*ಕಿಡ್ನಾಪ್ ದೃಶ್ಯ ಸೆರೆ?
ರೇಣುಕಸ್ವಾಮಿ ಕಿಡ್ನಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಜೂ.8ರ ಬೆಳಗ್ಗೆ 9.30 ರ ಸಮಯದಲ್ಲಿ ರೇಣುಕಸ್ವಾಮಿ ಮನೆ ಬಿಡುತ್ತಿದ್ದಂತೆ ಆರೋಪಿಗಳು ಆತನನ್ನು ಹಿಂಬಾಲಿಸಿದ್ದಾರೆ. ಸ್ಕೂಟಿಯಲ್ಲಿ ಜೆಸಿಆರ್ ಕಡೆಗೆ ಹೊರಟಿದ್ದ ಸ್ವಾಮಿಯನ್ನು ಆಟೋದಲ್ಲಿ ಆರೋಪಿತರು ಬೆನ್ನುಬಿದ್ದಿದ್ದು, 9.40ರ ಸಮಯದಲ್ಲಿ ಗಾಯತ್ರಿ ಸರ್ಕಲ್‌ನಿಂದ ನ್ಯಾಷನಲ್ ಹೋಟೆಲ್‌ವರೆಗೂ ಹಿಂಬಾಲಿಸಿದ್ದಾರೆಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net