ಚಾಮರಾಜನಗರ: ಸಮಾಜದ ಸ್ವಾಸ್ಥವನ್ನು ಹಾಳು ಮಾಡಿ ಜಾತಿ ಜಾತಿಗಳಲ್ಲಿ ಕಂದಕ ಸೃಷ್ಟಿಸಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಯಾರೇ ಭಾಗಿಯಾಗಿದ್ದರೂ ಕೂಡ ಅವರನ್ನು ಪತ್ತೆ ಮಾಡಿ ಉಗ್ರ ಶಿಕ್ಷೆ ನೀಡಬೇಕೆಂದು ಕಾಂಗ್ರಸ್ ಮುಖಂಡ ಡಿ.ಎನ್. ನಟರಾಜು ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮತ್ತು ಭಗವಾನ್ ಬುದ್ಧರ ವಿಗ್ರಹವನ್ನು ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡಿದ ಮಾತನಾಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮತ್ತು ಈ ಸಮಾಜದ ಶಾಂತಿ ಸ್ಥಾಪನೆಗೆ ಕಾರಣಕರ್ತರಾದ ಭಗವಾನ್ ಬುದ್ಧರ ವಿಗ್ರಹವನ್ನು ಧ್ವಂಸಗೊಳಿಸಿರುವ ಘಟನೆ ನಾಗರಿಕ ಸಮಾಜದ ಅತ್ಯಂತ ಹೇಯ ಕೃತ್ಯವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗಳ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂತೇಮರಹಳ್ಳಿ ಭಾಗದ ವೀರಶೈವ ಹಿರಿಯ ಮುಖಂಡರಾದ ಎಂ.ಪಿ ತಮ್ಮಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ಹೋರಾಟಗಾರ್ತಿ ಮಧು ಹೊಲೆಯಾರ್, ಗ್ರಾಮದ ಯಜಮಾನರಾದ ಕೃಷ್ಣ, ಲಿಂಗರಾಜು, ವೀರಣ್ಣ, ಶೇಷಣ್ಣ , ರಾಘವೇಂದ್ರ, ನಾಗರಾಜು, ಮಲ್ಲೇಶ್, ಕೇಶವಮೂರ್ತಿ, ಬೋರಯ್ಯ ಮತ್ತು ಇತರರು ಪಾಲ್ಗೊಂಡಿದ್ದರು.