

ವಿಜಯವಾಣಿ ಸುದ್ದಿಜಾಲ ಆನೇಕಲ್
ಪೇದೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ತೆರಳಿದ್ದ ಆನೇಕಲ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ ವರುಣ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪಟ್ಟಣದ ದೇವರಕೊಂಡ ರಸ್ತೆಯಲ್ಲಿ ಗುರುವಾರ ಗಾಂಜಾ ಮತ್ತಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದ ಪೇದೆ ರಂಗನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದ ವರುಣ್ ಹಾಗೂ ಆತನ ಸಹಚರರು ದಿನ್ನೂರು ರಸ್ತೆಯತ್ತ ತೆರಳಿದ್ದರು. ಅವರನ್ನು ಹಿಂಬಾಲಿಸಿದ ಪೇದೆ ಮೇಲೆ ದಿನ್ನೂರಿನ ನೀಲಗಿರಿ ತೋಪಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆರೋಪಿಗಳ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಪ್ರಕರಣ ನಡೆದ ದಿನವೇ ಡ್ಯಾನಿ ಎಂಬಾತನನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ವರುಣ್, ಜಿಗಣಿಯ ಕಲ್ಲುಬಾಳು ಮನೆಯೊಂದರಲ್ಲಿ ಇರುವ ಮಾಹಿತಿ ಮೇರೆಗೆ ಭಾನುವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೇದೆ ಶಂಕರ್ ಕೈಗೆ ಗಾಯವಾಗಿದ್ದು, ಇನ್‌ಸ್ಪೆಕ್ಟರ್ ಚಂದ್ರಪ್ಪ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರುಣ್ ಈಗಾಗಲೇ ಹಲವು ಪ್ರಕರಣದಲ್ಲಿ ಬಂಧಿತನಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಆದರೂ ಪುಂಡರನ್ನು ಜತೆಗೂಡಿಸಿಕೊಂಡು ಗಾಂಜಾ ಮತ್ತಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ, ಪೇದೆಯ ಮೇಲೆಯೂ ಗಾಂಜಾ ಅಮಲಿನಲ್ಲೇ ಹಲ್ಲೆ ಮಾಡಿದ್ದ.
ಅಪಹಕಾರರ ಬಂಧನ
ಬನ್ನೇರುಘಟ್ಟ ಹಾಗೂ ಜಿಗಣಿ ಠಾಣಾ ವ್ಯಾಪ್ತಿಯಲ್ಲಿ ಲಾರಿ ಹಾಗೂ ಆಟೋ ಚಾಲಕರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪಿಗಳ ತಂಡದಲ್ಲಿದ್ದ ಕೃಷ್ಣ ಹಾಗೂ ಅಜಯ್ ಎಂಬಾತನನ್ನು ಭಾನುವಾರ ಜಿಗಣಿ ಪೊಲೀಸರು ಹಾರಗೆದ್ದೆಯ ಬಳಿಯ ನಾಯನಹಳ್ಳಿಯಲ್ಲಿ ಬಂಧಿಸಿದ್ದಾರೆ.
ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಅಜಯ್ ಎಂಬಾತ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಿಗಣಿ ಠಾಣೆಯ ಅಪರಾಧ ವಿಭಾಗದ ಪೇದೆ ಮಹೇಶ್ ಕೈಗೆ ಗಾಯವಾಗಿದ್ದು, ಇನ್‌ಸ್ಪೆಕ್ಟರ್ ಸುದರ್ಶನ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕೃಷ್ಣ ಕೂಡ ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರ ಗುಂಡೇಟಿನಿಂದ ಒಂದು ಕಾಲು ಕಳೆದುಕೊಂಡಿದ್ದರೂ ಪುನಃ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ: ಆನೇಕಲ್ ಠಾಣೆಯ ಅಪರಾಧ ವಿಭಾಗದ ಪೇದೆ ಶಂಕರ್ ಹಾಗೂ ಜಿಗಣಿ ಠಾಣೆಯ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬನ್ನೇರುಘಟ್ಟ ಸುತ್ತಮುತ್ತ ಕೃಷ್ಣ ಹಾಗೂ ಆತನ ಗ್ಯಾಂಗ್ ಕೆಲವು ದಿನಗಳಿಂದ ಆರಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಹಣ ಕೊಡದವರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ದೂರು ಬಂದಿದ್ದವು. ಬನ್ನೇರುಘಟ್ಟ, ರಾಮನಗರ, ಬೆಂಗಳೂರು ಸೇರಿ ಹಲವು ಕಡೆ ಈತನ ಮೇಲೆ ಪ್ರಕರಣ ದಾಖಲಾಗಿದ್ದವು. ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಅಜಯ್ ಕಾಲಿಗೆ ಗುಂಡು ಹಾರಿಸಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಆನೇಕಲ್ನಲ್ಲಿ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣ ಆರೋಪಿ ವರುಣ್ ಕಾಲಿಗೂ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.