

ಗೌರಿಬಿದನೂರು: ಶೂನ್ಯ ಬಡ್ಡಿದರ ಯೋಜನೆ ದುರ್ಬಳಕೆ, ಸಾಲ ನೀಡಲು ಸಂಘಗಳಿಂದ ಹಣ ವಸೂಲಿ, ರಾಜಕೀಯ ಹಸ್ತಕ್ಷೇಪದ ಆರೋಪಗಳಿಗೆ ತೀಕ್ಷ್ಣ ಸ್ಪಷ್ಟನೆ ನೀಡಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಾಲ ಅನುಮೋದನೆಗೆ ಸಂಘಗಳಿಂದ ಹಣ ವಸೂಲಿ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡಿ ನೇಣು ಹಾಕಿಕೊಳ್ಳುವುದಾಗಿ ಸವಾಲೆಸೆದಿದ್ದಾರೆ.
ಬ್ಯಾಂಕ್‌ನಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದ ಕೋಚಿಮುಲ್ ನಿರ್ದೇಶಕ ಕಾಂತರಾಜು, ನಗರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಎಂ.ನರಸಿಂಹಮೂರ್ತಿ, ಅಲಕಾಪುರ ಸಂಘದ ಅಧ್ಯಕ್ಷ ಗೋಪಾಲಗೌಡ, ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದರು.
ಆರೋಪಗಳಿಗೆ ಗುರುವಾರ ನಗರದ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರ ಸಭೆಯಲ್ಲಿ ಪ್ರತಿಕ್ರಿಯಿಸಿದ ಗೋವಿಂದಗೌಡ, ಸಹಕಾರಿ ಕ್ಷೇತ್ರದ ಬಗ್ಗೆ ತಿಳಿವಳಿಕೆ ಇಲ್ಲದ ಕೆಲವರು ಆರೋಪ ಮಾಡುತ್ತಿದ್ದಾರೆ. ಯಾವುದೇ ತನಿಖೆ ನಡೆದರೂ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು. ಸಾಲ ಮಂಜೂರಾತಿಗೆ ನಾನು 100 ರೂ. ಪಡೆದಿದ್ದೇನೆಂದು ಒಬ್ಬ ಕಾರ್ಯದರ್ಶಿ ಹೇಳಿದರೂ ರಾಜೀನಾಮೆ ನೀಡುವುದಾಗಿ ಮರು ಉಚ್ಚರಿಸಿದರು.
ಬ್ಯಾಂಕ್ ಪುನಶ್ಚೇತನಗೊಂಡು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೇರಲು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹಾಗೂ ಶಾಸಕ ಶಿವಶಂಕರರೆಡ್ಡಿ ಅವರ ಕೊಡುಗೆ ಸಾಕಷ್ಟಿದೆ. ಆ ಕಾರಣದಿಂದ ಅವರ ಬಗ್ಗೆ ಒಂದೆರಡು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದೇವೆಯೇ ಹೊರತು ಅವರ ಪರ ಪ್ರಚಾರಕ್ಕೆ ನಿಂತಿಲ್ಲ. ಈ ಹಿಂದೆ ಶಾಸಕರಿಂದ ಸಹಾಯ ಪಡೆದವರು ಈಗ ಪಕ್ಷಾಂತರಗೊಂಡು ನಿಯತ್ತು ಇಲ್ಲದೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ನಿರ್ದೇಶಕ ಮರಳೂರು ಹನುಮಂತರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಅಧಿಕಾರಿ ಬೈರೇಗೌಡ, ಬ್ಯಾಂಕಿನ ಸ್ತ್ರೀಶಕ್ತಿ ಅನುಷ್ಠಾನ ಅಧಿಕಾರಿ ಶುಭಾ, ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕ ಮಹಮ್ಮದ್ ಅಸ್ಲಾಂ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಹಾಜರಿದ್ದರು.