ಆರೋಪ ಮಾಡುವ ಬದಲು ಸಾಕ್ಷೃ ಬಿಡುಗಡೆ ಮಾಡಲಿ: ಸಮಿವುಲ್ಲಾ ತಿರುಗೇಟು

ಆರೋಪ ಮಾಡುವ ಬದಲು ಸಾಕ್ಷೃ ಬಿಡುಗಡೆ ಮಾಡಲಿ: ಸಮಿವುಲ್ಲಾ ತಿರುಗೇಟು
Published on

ಹಾಸನ: ಅರಸೀಕೆರೆಗೆ ಮೂರು ತಿಂಗಳು, ಆರು ತಿಂಗಳಿಗೊಮ್ಮೆ ಅತಿಥಿಯಾಗಿ ಬಂದು ಹೋಗುವಂತಹ ವ್ಯಕ್ತಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಆತ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಎನ್.ಆರ್ ಸಂತೋಷ್ ಅವರ ಆರೋಪಕ್ಕೆ ಅರಸೀಕೆರೆ ನಗರಸಭೆ ಅಧ್ಯಕ್ಷ ಸಮಿವುಲ್ಲಾ ತಿರುಗೇಟು ನೀಡಿದರು.
ಜ್ಞಾನದ ಕೊರತೆಯಿಂದ ಎನ್.ಆರ್ ಸಂತೋಷ್ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪಕ್ಕೆ ಯಾವುದೇ ಹುರುಳಿಲ್ಲ. ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಜನರಿಗೆ ತೊಂದರೆ ಬಯಸಿಲ್ಲ. ಆದರೆ ಈತ ಅರಸೀಕೆರೆಗೆ ಬಂದ ದಿನದಿಂದಲೂ ಕೂಡ ಎಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿವೆ ಈಗಾಗಲೇ ಕ್ಷೇತ್ರದ ಜನತೆಗೆ ತಿಳಿದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು
ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಅವ್ಯವಹಾರ ಮಾಡಿದ್ದರೆ ದಾಖಲೆ ಸಮೇತ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಕಂಡಲ್ಲಿ ಗುಂಡು ಹೊಡೆಯುವುದನ್ನು ಮಾಡಬಾರದು. 19 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ ಎಂದು ಹೇಳಿರುವ ಸಂತೋಷ ಈ 19 ಕೋಟಿ ರೂ.ಯನ್ನು ನಗರಸಭೆಯ ಆಡಳಿತ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿಗಳು ಬಜೆಟ್ ಮಂಡಿಸಿ ಅನುಮೋದನೆ ನೀಡಿರುವುದು. ಇಷ್ಟು ಜ್ಞಾನ ಇಲ್ಲದ ಇರುವ ವ್ಯಕ್ತಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾವುದೇ ರೀತಿ ಲೇಔಟ್ ಮಾಡಿಲ್ಲ. ನಗರಸಭೆ ಅಧ್ಯಕ್ಷನಾಗಿ ಕಾನೂನುಬದ್ಧವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ವಸತಿ ಯೋಜನೆಯಲ್ಲಿ ಈಗಾಗಲೇ ನಗರದಲ್ಲಿ ನಿರ್ಮಾಣ ಹಂತದಲ್ಲಿರುವಂತಹ ಮನೆಗಳಿಗೆ ಅರ್ಜಿ ಕರೆಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನಗರಸಭೆಯಿಂದ ನಾವೇ ಹಣ ಕಟ್ಟಿದ್ದೇವೆ. ಆದರೆ ಸಂತೋಷ್‌ಗೆ ಮಾಹಿತಿ ಕೊರತೆಯಿಂದಾಗಿ ಇಲ್ಲ ಸಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ನಗರಸಭೆ ಸದಸ್ಯರಾದ ಗಣೇಶ್, ರಾಜು, ಮುಖಂಡ ಮಲ್ಲಿಕಾರ್ಜುನ್ ಹಾಜರಿದ್ದರು

ಮತದಾರರೇ ಪಶ್ಚತ್ತಾಪ ಪಡುತ್ತಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಒಂದು ದಿನದಲ್ಲಿ ಜೆಡಿಎಸ್‌ಗೆ ಬಂದು ಸ್ಪರ್ಧಿಸಿ 70,000ಕ್ಕೂ ಅಧಿಕ ಮತಗಳನ್ನು ಪಡೆದಿರುವ ಈತನ ಎಲ್ಲ ವ್ಯವಹಾರಗಳನ್ನುಇ ಗಮನಿಸಿರುವ ಕ್ಷೇತ್ರದ ಜನರು ಮತ ಹಾಕಿರುವುದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ. ಸಣ್ಣತನದಿಂದ ರಾಜಕಾರಣ ಮಾಡುವ ಈತ ಏನಾದರೂ ಶಾಸಕನಾಗಿದ್ದರೆ ನಗರದ ಜನರು ನಿಜವಾಗಲೂ ನರಕ ಅನುಭವಿಸುತ್ತಿದ್ದರು. ಈತನಿಗೆ ಅಷ್ಟು ಸಾವಿರ ಮತ ಬಿದ್ದಿರುವುದೇ ದುರಂತ ಎಂದು ಎನ್.ಆರ್. ಸಂತೋಷ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net