

ಕಲಬುರಗಿ: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಜೀವನದಲ್ಲಿ ಆರೋಗ್ಯವಂತರಾಗಿ ಮತ್ತು ಸದೃಢರಾಗಿರಲು ಆಟೋಟಗಳು, ವಾಕಿಂಗ್, ವ್ಯಾಯಾಮ ಮುಖ್ಯವಾಗಿದ್ದು, ಎಲ್ಲರೂ ಪ್ರತಿದಿನ ಒಂದಿಷ್ಟು ಸಮಯ ದೈಹಿಕ ಕಸರತ್ತಿಗೆ ಮೀಸಲಿರಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರದಿಂದ ಆರಂಭಗೊಂಡ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಪಾರಿವಾಳ ಮತ್ತು ಬಲೂನ್ ಹಾರಿಬಿಟ್ಟು ಉದ್ಘಾಟಿಸಿ, ಕ್ರೀಡೆಗಳಿಂದ ದೈಹಿಕ ಶಕ್ತಿ ವೃದ್ಧಿಸುತ್ತದೆ. ಜತೆಗೆ ಮಾನಸಿಕ ನೆಮ್ಮದಿ ಜತೆಗೆ ಸದೃಢ ಶರೀರ ಹೊಂದಲು ಸಾಧ್ಯವಾಗಲಿದೆ ಎಂದರು.
ಇದೇ ಮೈದಾನದಲ್ಲಿ 2006ರಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ತರಬೇತಿ ಪಡೆದ ದಿನಗಳು ಕಣ್ಣೆದುರಿಗೆ ಬರುತ್ತಿದೆ ಎಂದು ಹಳೆಯ ನೆನಪು ಮೆಲಕು ಹಾಕಿದರು. ಪೊಲೀಸರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸೃದೃಢರಾಗಿರಬೇಕು, ಆಗಲೇ ಕರ್ತವ್ಯವನ್ನು ಮಾದರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲರೂ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆಟೋಟಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾಜರ್್ ಮಾತನಾಡಿ, ಪೊಲೀಸರು ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಹಾಗೂ ಮಾನಸಿಕ ಶಕ್ತಿಯ ಅಗತ್ಯವಿದೆ ಎಂದರು.
ಕಳೆದ ವರ್ಷ ಸರ್ವಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಪಡೆದ ಕಲಬುರಗಿ ಡಿಎಆರ್ ಪೇದೆ ಉದಯಕುಮಾರ ಅವರಿಂದ ಕ್ರೀಡಾ ಜ್ಯೋತಿಯನ್ನು ಪ್ರಾದೇಶಿಕ ಆಯುಕ್ತ ಪ್ರಸಾಧ ಅವರು ಸ್ವೀಕರಿಸಿದರು. ಪರೇಡ್ ಕಮಾಂಡರ್ ಹನುಮಂತ ನಾಯಕ ನೇತೃತ್ವದಲ್ಲಿ ಜಿಲ್ಲೆ 6 ತಂಡಗಳಾದ ಡಿಎಆರ್ ವಿಭಾಗ, ಗ್ರಾಮೀಣ ಉಪ ವಿಭಾಗ, ಚಿಂಚೋಳಿ ಉಪ ವಿಭಾಗ, ಶಹಾಬಾದ್ ಉಪ ವಿಭಾಗ, ಆಳಂದ ಉಪ ವಿಭಾಗ ಹಾಗೂ ಮಹಿಳಾ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.
ರಾಜ್ಯ ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ ಪಾಟೀಲ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಪಂ ಸಿಇಒ ಡಾ. ದಿಲೀಶ್ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಕೆಎಸ್ಆರ್ಪಿ ಕಮಾಡೆಂಟ್ ಬಸವರಾಜ ಜಿಳ್ಳೆ, ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ, ಡಿಎಸ್ಪಿಗಳಾದ ಉಮೇಶ ಚಿಕ್ಕಮಠ, ವೀರಭದ್ರಯ್ಯ, ತಾಯಪ್ಪ ದೊಡ್ಡಮನಿ, ಮಲ್ಲಿಕಾಜರ್ುನ ಸಾಲಿ, ಪಟ್ಟಣ, ವೀರೇಶ, ಸಿಪಿಐಗಳಾದ ರಾಜಶೇಖರ ಹಳಿಗೋಧಿ, ಶಂಕರಗೌಡ ಪಾಟೀಲ್, ಭೀಮರತ್ನ, ನಿವೃತ್ತ ಡಿಎಸ್ಪಿ ಬಸವರಾಜ ಇಂಗಿನ, ಸಮಾಜಿಕ ಕಾರ್ಯಕರ್ತ ದೇವೇಂದ್ರಪ್ಪ ಸೇರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.
ಸತೀಶ ಪಾಟೀಲ್ ಹಾಗೂ ಶಶಿಕಲಾ ಜಡೆ ನಿರೂಪಣೆ ಮಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ವಂದಿಸಿದರು.