

ಚಿತ್ರದುರ್ಗ: ರಕ್ತದಾನ ಅತ್ಯಂತ ಮಹತ್ವದ್ದಾಗಿದ್ದು, 45 ಕೆ.ಜಿ ತೂಕವಿರುವ ಆರೋಗ್ಯವಂತರೆಲ್ಲರೂ ಪ್ರತಿ 3 ತಿಂಗಳಿಗೊಮ್ಮೆ ದಾನ ಮಾಡಬಹುದು ಎಂದು ಡಾ.ನಾರಾಯಣಮೂರ್ತಿ ಸಲಹೆ ನೀಡಿದರು.
ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವೇಶ್ವರ ಆಸ್ಪತ್ರೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಉಚಿತ ರಕ್ತ ಗುಂಪು ಪರೀಕ್ಷೆ, ರಕ್ತದಾನದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನ್ನ, ನೇತ್ರ, ದೇಹ ಸೇರಿ ಇನ್ನಿತರೆ ದಾನಗಳಿಗಿಂತಲೂ ರಕ್ತದಾನ ಮುಖ್ಯವಾದುದು. ಇದರಿಂದ ದೇಹದೊಳಗೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಮಾಯವಾಗುತ್ತವೆ. ತ್ವಚೆಯ ಸೌಂದರ್ಯವೂ ಹೆಚ್ಚಾಗುತ್ತದೆ ಎಂದರು.
ಸತ್ಯನಾರಾಯಣ್ ಮಾತನಾಡಿ, ಬಸವೇಶ್ವರ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ತುರ್ತು ಸಂದರ್ಭ ಬಂದಾಗ ನಿರ್ಲಕ್ಷಿಸದೆ, ಸಂಪರ್ಕಿಸಲು ಮುಂದಾಗಿ ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ, ಎನ್‌ಎಸ್‌ಎಸ್ ಅಧಿಕಾರಿ ಶಿವಕುಮಾರ್, ಪ್ರೊ.ಎಂ.ಎಸ್.ಪರಮೇಶ್ವರ್ ಇದ್ದರು.