ಆರೋಗ್ಯವಂತ ಸಮಾಜಕ್ಕಾಗಿ ಉಚಿತ ಯೋಗ ತರಬೇತಿ

10 mlv 2
Published on

ಮಳವಳ್ಳಿ: ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತವಾಗಿ ಯೋಗ ತರಬೇತಿ ನೀಡಲಾಗುತ್ತಿದ್ದು, ಆರೋಗ್ಯವಂತ ಸಮಾಜದ ಸದುದ್ದೇಶ ಹೊಂದಿರುವ ಸಮಾನ ಮನಸ್ಕ ಯೋಗಗುರುಗಳು ಸೇರಿಕೊಂಡು ಈ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್ ತಿಳಿಸಿದರು.


ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪಟ್ಟಣದ ರೈತ ಸಮುದಾಯ ಭವನ ಹಾಗೂ ಕುಮಾರ್ ಸಮುದಾಯ ಭವನದಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಶಿಬಿರದಲ್ಲಿ ಯೋಗದಿಂದ ಆಗುವ ಉಪಯೋಗಗಳು, ಜೀವನಶೈಲಿ, ಆಹಾರ ಪದ್ಧತಿ ಅದರಲ್ಲೂ ಸಾವಯವ ಪದಾರ್ಥಗಳ ಬಳಕೆಯಿಂದಾಗುವ ಉಪಯುಕ್ತತೆ ಬಗ್ಗೆ ತಿಳಿಸಿಕೊಟ್ಟರು. ಜ.18ರಿಂದ ಹೊಸ ಯೋಗ ತರಗತಿಗಳನ್ನು ಪ್ರಾರಂಭಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.


ಇದಕ್ಕೂ ಮೊದಲು ಮಾತೃ ಭೋಜನ ಹೆಸರಿನಲ್ಲಿ ಯೋಗಪಟುಗಳಿಗೆ ಕೈ ತುತ್ತು ನೀಡುವ ಮೂಲಕ ಕೈ ತುತ್ತಿನ ಮಹತ್ವದ ಬಗ್ಗೆ ಪ್ರವಚನ ನೀಡಲಾಯಿತು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಿಬಿರದಲ್ಲಿ ಭಾಗಿಯಾಗಿದ್ದ 400ಕ್ಕೂ ಹೆಚ್ಚು ಶಿಬಿರಾರ್ಥಿಗಳು ಯೋಗ ನಡಿಗೆ ಮೂಲಕ ಭಾಗವಹಿಸಿ ಗಮನ ಸೆಳೆದರು.


ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ, ಮುಳಬಾಗಿಲು, ತುಮಕೂರು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.


ಬಿ.ಜಿ. ಪುರ ಹೊರಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ, ರೋಟರಿ ಸಂಸ್ಥೆ ಅಧ್ಯಕ್ಷ ಗೌತಮ್ ಚಂದ್, ವಿಶ್ವನಾಥ್, ಯೋಗ ಶಿಕ್ಷಕ ದೊಡ್ಡಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net