

ಆನೇಕಲ್: ಆರೋಗ್ಯವಂತ ಯುವ ಜನತೆ ಈ ದೇಶದ ಆಸ್ತಿ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಅದೇ ರೀತಿ ಇಂದು ದೇಶ ಯೋಗಾಭ್ಯಾಸಕ್ಕೆ ಆದ್ಯತೆ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಗಣಿಯ ಎಸ್.ವ್ಯಾಸ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಶಾಂತಿ ದಿನ ಆಚರಣೆ ಹಿನ್ನೆಲೆಯಲ್ಲಿ ನವೀಕೃತ ಸಂತೋಷ ಹಾಗೂ ತಪಸ್ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ಕರೊನಾ ವೇಳೆ ಜನರಲ್ಲಿ ಮಾನಸಿಕ ಹಾಗೂ ಶಾರೀರಿಕ ಒತ್ತಡ ಹೆಚ್ಚಾಗಿತ್ತು. ಇಂಥ ಸಂದರ್ಭದಲ್ಲಿ ನಮ್ಮ ಜನ ಮೊದಲು ಶರಣಾಗಿದ್ದು ಯೋಗಕ್ಕೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಯೋಗ ಹಾಗೂ ಸಮಗ್ರ ಚಿಕಿತ್ಸೆಗೆ ಹೆಚ್ಚಿನ ಒತ್ತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕೊಡುತ್ತಿದ್ದಾರೆ. ಇದಕ್ಕೆ ನಾಗೇಂದ್ರ ಗುರೂಜಿ ಆಶೀರ್ವಾದ ಇದೆ ಎಂಬುದು ಹೆಮ್ಮೆಯ ಸಂಗತಿ ಎಂದರು.
2011ರಲ್ಲಿ ರಾಜಕೀಯ ಜಂಜಾಟದಿಂದ ದೂರ ಇದ್ದಾಗ ತಾವು ಇಲ್ಲಿ ಹಲವು ದಿನ ಯೋಗ ಚಿಕಿತ್ಸೆ ಪಡೆದುಕೊಂಡಿದ್ದನ್ನು ಸ್ಮರಿಸಿಕೊಂಡರು.
ಎಸ್ ವ್ಯಾಸ ಅನುಸಂಧಾನ ಕೇಂದ್ರದ ಕುಲಪತಿ ಗುರೂಜಿ ಡಾ. ಎಚ್.ಆರ್.ನಾಗೇಂದ್ರ ಮಾತನಾಡಿ, ಸಮಗ್ರ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಇಂದು ಜನತೆ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮಲ್ಲಿ ಬರುವ ರೋಗಿಗಳಿಗೆ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ದೇಸಿ ಪದ್ಧತಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆಗೆ ಮೂಲ ಕಾರಣ ಅರಿತು ನಿಗದಿತ ಚಿಕಿತ್ಸೆ ನೀಡಲು ಸುಶ್ರುತ ಆಯುರ್ವೇದಿಕ್ ಮಹಾವಿದ್ಯಾಲಯ ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ಪ್ರಾಣಯಾಮ ಅಭ್ಯಾಸ: ನವೀಕೃತ ಸಂತೋಷ ಹಾಗೂ ತಪಸ್ ಸಭಾಂಗಣದಲ್ಲಿ ಪ್ರತಿದಿನ ಯೋಗಾಸನ, ಪ್ರಾಣಾಯಾಮ ಅಭ್ಯಾಸ ನಡೆಯುತ್ತದೆ. ಏಕಕಾಲಕ್ಕೆ ಮುನ್ನೂರು ಜನ ಯೋಗಾಭ್ಯಾಸ ಮಾಡಲು ಹಾಗೂ ಸಾವಿರ ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಸಭಾಂಗಣ ನಿರ್ಮಾಣಕ್ಕೆ ಬಿ.ಎಸ್.ಯಡಿಯೂರಪ್ಪ ಕಾರಣೀಭೂತರು. ಅವರು ಸಿಎಂ ಆಗಿದ್ದಾಗ ಅವರನ್ನು ಭೇಟಿಯಾಗಿ, ಸಭಾಂಗಣಗಳ ನವೀಕರಣಕ್ಕೆ ಮನವಿ ಮಾಡಿಕೊಂಡಾಗ, 5 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಸಭಾಂಗಣವನ್ನು ಅವರೇ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಡಾ. ಎಚ್.ಆರ್.ನಾಗೇಂದ್ರ ಹೇಳಿದರು.
ಪ್ರಶಾಂತಿ ಕುಟೀರಕ್ಕೆ ತೆರಳಿದ ಬಿ.ಎಸ್.ಯಡಿಯೂರಪ್ಪ ಗಣಪತಿ ದೇವಸ್ಥಾನದಲ್ಲಿ ಏರ್ಪಾಡಾಗಿದ್ದ ಹೋಮದಲ್ಲಿ ಪೂರ್ಣಾಹುತಿ ಸಮರ್ಪಿಸಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು. ಎಸ್ ವ್ಯಾಸ ವಿವಿಯ ಕುಲಪತಿ ಡಾ. ಬಿ.ಆರ್. ರಾಮಕೃಷ್ಣ, ಕುಲಸಚಿವ ಎಂ.ಕೆ. ಶ್ರೀಧರ್, ಪ್ರೊ.ಡಾ.ಸುಬ್ರಹ್ಮಣ್ಯ, ದಯಾನಂದ ಸ್ವಾಮಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ದೇವಿ, ಪ್ರಹ್ಲಾದ್ ರಾಮರಾವ್, ಕೆ.ಶಂಕರನಾರಾಯಣನ್, ವಿಜ್ಞಾನಿ ಸುಬ್ರಹ್ಮಣಿ, ಡಾ. ಮಂಜುನಾಥ್ ಮತ್ತಿತರರು ಇದ್ದರು.