ಆರೋಗ್ಯವಂತ ಮಕ್ಕಳಿಗಾಗಿ ಪೋಷಣ್ ಅಭಿಯಾನ

11adarshkdga1
Published on

ಕುಶಾಲನಗರ: ಸರ್ಕಾರಗಳು ಕೇವಲ ರಸ್ತೆ, ಚರಂಡಿ, ಕುಡಿಯುವ ನೀರು, ದೀಪ ನೀಡುವುದಲ್ಲದೆ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಲು ಮುಂದಿನ ಪೀಳಿಗೆಯ ಮಕ್ಕಳು ಆರೋಗ್ಯವಾಗಿ ಇರಬೇಕು ಎಂಬ ದೃಷ್ಟಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಚಿಕ್ಕತೂರು ಗ್ರಾಮದ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗರ್ಭಿಣಿ ಮಹಿಳೆಯರು ಮಾನಸಿಕವಾಗಿಯೂ ಕೂಡ ಆರೋಗ್ಯವಾಗಿರಬೇಕು ಎಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಪೋಷಣ್ ಅಭಿಯಾನದಲ್ಲಿ ಪೌಷ್ಟಿಕ ಆಹಾರವೇ ನಿಜವಾದ ರೋಗ ನಿರೋಧಕ ಶಕ್ತಿ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ ನೀಡುತ್ತಾ ಸೊನ್ನೆಯಿಂದ ಐದು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹದಿಹರೆಯದವರು, ಹಿರಿಯ ನಾಗರಿಕರು, ರಕ್ತ ಹೀನತೆಯಿಂದ ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಖತೀಜ, ದಿನೇಶ್, ಲೋಕಸಂಘದ ಅಧ್ಯಕ್ಷರಾದ ಸ್ವಾಮಿ ಮತ್ತು ಅಂಗನವಾಡಿ ಆಶಾ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net