

ಸಕಲೇಶಪುರ: ಯುವ ಜನರಿಗೆ ಡ್ರಗ್ಸ್ ಮಾರಕವಾಗಿದ್ದು ದೇಶವನ್ನು ಡ್ರಗ್ಸ್ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಭಾರತ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಅಪಾರ ಆದಾಯ ಬರುತ್ತಿದೆ. ಇದು ಬಡವರ ಕಣ್ಣೀರಿನ ಹಣ. ಈ ಬಗ್ಗೆ ಮಾತನಾಡಿದರೆ ನನ್ನ ಸ್ಥಾನಕ್ಕೆ ಕುತ್ತು ಬರಲಿದೆ. ಆದರೂ ಅವಕಾಶ ಸಿಕ್ಕವೇಳೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇನೆ. ಅಮಲು ಪದಾರ್ಥಗಳು ಯುವಕರ ರಕ್ತ ಹೀರುತ್ತಿದ್ದು ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಇದು ಅಡ್ಡಿಯಾಗಿದೆ. ಒಮ್ಮೆ ಡ್ರಗ್ಸ್ ಚಟಕ್ಕೆ ಒಳಗಾದವರು ಹೊರಬರುವುದು ತೀರಾ ಕಷ್ಟಕರ. ಆದ್ದರಿಂದ, ಪಾಲಕರು ತಮ್ಮ ಮಕ್ಕಳನ್ನು ಎಚ್ಚರದಿಂದ ಕಾಪಾಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಗಾಂಧಿವಾದಿ ಪ್ರಸನ್ನ ಮಾತನಾಡಿ, ಡ್ರಗ್ಸ್ ದೇಶದ ಅಭಿವೃದ್ಧಿಗೆ ಮಾರಕವಾಗಿದೆ, ಮಾದಕ ವಸ್ತುಗಳ ಚಟಕ್ಕೆ ದಾಸರಾದರೆ ಕುಟುಂಬ, ದೇಶಕ್ಕೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ, ಡ್ರಗ್ಸ್ ಬಳಕೆ ಮಾಡುವವರು ಹಾಗೂ ಪೊರೈಸುವವರ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಇದು ಎಲ್ಲ ಕರ್ತವ್ಯ ಎಂದರು.
ಡ್ರಗ್ಸ್ ಮುಕ್ತ ಭಾರತ ಹೋರಾಟಗಾರ ಅವಿನಾಶ್ ಕಾಕಡೆ ಮಾತನಾಡಿ, ಇಂದು ದೇಶದ ಗಡಿಭಾಗದಲ್ಲಿ ಡ್ರಗ್ಸ್ ವ್ಯಸನಕ್ಕೆ ಶೇ.50 ಯುವಕರು ಬಲಿಯಾಗಿದ್ದಾರೆ. ದೇಶದ ಅಂತರಿಕ ಶಕ್ತಿ ಕುಂದಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ಈ ಕೆಲಸ ಮಾಡುತ್ತಿವೆ. ಆದ್ದರಿಂದ ಡ್ರಗ್ಸ್ ವಿರುದ್ಧ ತೀವ್ರ ಮಟ್ಟದ ಹೋರಾಟದಲ್ಲಿ ಎಲ್ಲರೂ ತೊಡಗಿಕೊಳ್ಳದಿದ್ದರೆ ದೇಶ, ರಾಜ್ಯ ಹಾಗೂ ಕುಟುಂಬದ ಸ್ವಾಸ್ಥೃ ಹಾಳಾಗಲಿದೆ ಎಂದು ಎಚ್ಚರಿಸಿದರು.
ಮುಖಂಡ ಅಲಿಬಾಬ ಮಾತನಾಡಿ, ಮಕ್ಕಳಿಗೆ ಆರಂಭದಲ್ಲೇ ಉತ್ತಮ ಸಂಸ್ಕಾರ ಕಲಿಸುವುದರಿಂದ ಅಪಾಯಕಾರಿ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ತಪ್ಪಿಸಬಹುದು. ಇಂದು ಮಕ್ಕಳ ಬಗ್ಗೆ ನಿಗಾವಹಿಸದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಆಯೋಜಕರೂ ಆದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಡಿವೈಎಸ್‌ಪಿ ಪ್ರಮೋದ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಡಾ.ನವೀನ್ ಚಂದ್ರ ಶೆಟ್ಟಿ, ಮಹೆಬೂಬ್ ಷಾಷ ಉಪಸ್ಥಿತರಿದ್ದರು.