

ದಾವಣಗೆರೆ: ಅಸಮರ್ಪಕ ಜೀವನಶೈಲಿಯಿಂದಾಗಿ ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದೆ. ಓದಿನಷ್ಟೇ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ, ನೂತನ ವಿದ್ಯಾರ್ಥಿ ವೇದಿಕೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಓದಿನೊಂದಿಗೆ ಕ್ರೀಡೆ, ವ್ಯಾಯಾಮ, ಸಾಹಿತ್ಯ, ಲಲಿತ ಕಲೆಗಳು, ಯೋಗ, ಪ್ರಾಣಾಯಾಮ ಮುಂತಾದವುಗಳಿಗೂ ದಿನಚರಿಯಲ್ಲಿ ಸಮಯ ಮೀಸಲಿಡಬೇಕು. ಬಾಯಿ ರುಚಿಗೆ ಆದ್ಯತೆ ನೀಡಿದಲ್ಲಿ ಹೊಟ್ಟೆಯು ಕಸದತೊಟ್ಟಿ ಆಗಲಿದೆ. ಜೀವನ ಶೈಲಿಯಲ್ಲಿ ಆಹಾರ ವಿಧಾನವೂ ಪ್ರಮುಖವಾಗಿದೆ ಎಂದು ಹೇಳಿದರು.
ಯುವಜನರು ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂತಾದವುಗಳನ್ನು ವೀಕ್ಷಿಸುವ ಸಮಯದಲ್ಲೂ ನಿಯಂತ್ರಣ ಬೇಕು. ಇದಕ್ಕೆ ‘ಸ್ಕ್ರೀನ್ ಟೈಂ ಮ್ಯಾನೇಜ್‌ಮೆಂಟ್’ ಎಂದು ಹೇಳಲಾಗುತ್ತದೆ. ವಿದ್ಯಾರ್ಥಿಗಳು ದೌರ್ಬಲ್ಯಗಳನ್ನು ಗ್ರಹಿಸಿ ಪಾಲಕರು, ಶಿಕ್ಷಕರ ಅನುಭವದ ಮಾತು ಪಾಲಿಸಿ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡಗಳಿಂದ ಪರಿಹಾರ ಸಾಧ್ಯ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಕುಲಸಚಿವ ಡಾ.ಬಿ.ರಂಗಸ್ವಾಮಿ ಮಾತನಾಡಿ ಕೌಟುಂಬಿಕ ಅಪರಾಧಗಳ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ. ಸಂಸ್ಕಾರವಿಲ್ಲದ, ಶಿಕ್ಷೆ ಇಲ್ಲದ, ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣ ವಿಧಾನವು ಇದಕ್ಕೆ ಕಾರಣವಾಗಿದೆ ಎಂದರು.
ವೈಫಲ್ಯಗಳಿಂದ ದೃತಿಗೆಡದೆ ಆತ್ಮವಿಶ್ವಾಸದಿಂದ ಗೆಲುವಿನ ಸಂಕಲ್ಪ ಮಾಡುತ್ತಾ ಸ್ವಸಾಮರ್ಥ್ಯದ ಅರಿವಿನೊಂದಿಗೆ ಹೆಜ್ಜೆಗಳನ್ನಿಡಬೇಕು. ಅಲ್ಪಾವಧಿಯಲ್ಲೇ ಗುರಿ ಸಾಧಿಸಬೇಕು. ಶೈಕ್ಷಣಿಕ ಬುದ್ಧಿವಂತಿಕೆಗಿಂತ ಭಾವನಾತ್ಮಕ ಬುದ್ಧಿವಂತಿಕೆ ಇದಕ್ಕೆ ಅವಶ್ಯಕ ಎಂದು ಹೇಳಿದರು.
ದೇಶದಲ್ಲಿ 93 ಕೋಟಿಗೂ ಅಧಿಕ ಮಂದಿ ನಿರಂತರ ಮೊಬೈಲ್ ಬಳಸುತ್ತಿದ್ದು ಈಗ ಮೊಬೈಲ್ ಅತಿ ಬಳಕೆಯ ಚಟದಿಂದ ಮುಕ್ತರನ್ನಾಗಿಸುವ ಕೇಂದ್ರಗಳು ಬೆಂಗಳೂರಿನಲ್ಲೇ ಸುಮಾರು 70ಕ್ಕೂ ಹೆಚ್ಚು ಆರಂಭಗೊಂಡಿವೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ.ರುದ್ರಪ್ಪ ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳಾಗಿದ್ದ ಪ್ರಸ್ತುತ ಸಾಫ್ಟ್‌ವೇರ್ ಇಂಜಿನಿಯರ್ ಬಿ.ಕಿರಣ್ ಹಾಗೂ ಆಯುರ್ವೇದ ವೈದ್ಯ ಡಾ.ಎಚ್. ಶಾಲಿನಿ ಅನುಭವ ಹಂಚಿಕೊಂಡರು. ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿ ಸಂಘದ ಪಿ.ಎಸ್.ಚಂದ್ರು, ವೈ.ಕಿಶನ್ ಇದ್ದರು. ಬಿ. ಪುಷ್ಪ್ಪಾ ಸ್ವಾಗತಿಸಿದರು. ಮೊಹಮ್ಮದ್ ಹುಜೇಫ್ ವಂದಿಸಿದರು