ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ

1692519692812
Published on

ಮೈಸೂರು: ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಆಫ್ ಮೈಸೂರು ಪಶ್ಚಿಮ, ಇನ್ನರ್ ವ್ಹೆಲ್ ಕ್ಲಬ್ ಆಫ್ ಮೈಸೂರು ಸಹಯೋಗದಲ್ಲಿ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಭಾನುವಾರ ಆಯೋಜಿಸಿದ್ದ ಆಯುರ್ವೇದ ತಪಾಸಣೆ ಹಾಗೂ ಮಧುಮೇಹ ಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಆರೋಗ್ಯಕರ ಜೀವನಕ್ಕೆ ಉತ್ತಮ ಜೀವನಶೈಲಿ, ಮಿತವಾದ ಸಾತ್ವಿಕ ಆಹಾರ ಸೇವಿಸಬೇಕು. ಜೀವನದಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.
ರಾಮಕೃಷ್ಣ ಆಶ್ರಮದ ರಿಮ್ಸೆ ಸಂಚಾಲಕ ಸ್ವಾಮಿ ಮಹಾಮೇಧಾನಂದಜೀ ಮಾತನಾಡಿ, ರೋಗ ಗುಣಪಡಿಸುವ ವೈದ್ಯರಲ್ಲಿ ರೋಗಿಗಳು ದೇವರನ್ನು ಕಾಣುತ್ತಾರೆ. ಹಾಗಾಗಿ ವೈದ್ಯೋ ನಾರಾಯಣೋ ಹರಿ ಎಂದು ಕರೆಯಲಾಗುತ್ತದೆ. ಆದರೆ ರೋಗಿಯಾಗಿ ತಮ್ಮ ಮುಂದೆ ಬಂದಿರುವುದು ನಾರಾಯಣ ಎನ್ನುವ ಭಾವನೆಯಿಂದ ವೈದ್ಯರು ಸೇವೆ ಮಾಡಿದರೆ ಅದು ಪೂಜೆಗೆ ಸಮಾನ ಎಂದರು.
ಸಂಕಷ್ಟದಲ್ಲಿರುವ ಜನರನ್ನು ಪ್ರೀತಿಭಾವದಿಂದ ಕಾಣಬೇಕು. ಇಂದಿನ ದುಬಾರಿ ದಿನಗಳಲ್ಲಿ ಸಾಧ್ಯವಾದಷ್ಟು ಬಡವರಿಗೆ ಅನುಕೂಲವಾಗುವ ರೀತಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಬೇಕು. ಇದರಿಂದ ವೈದ್ಯರ ಘನತೆ ಮತ್ತಷ್ಟು ಹೆಚ್ಚುತ್ತದೆ. ರೋಗಿಯ ಕಾಯಿಲೆ ಗುಣವಾಗುವುದರ ಜತೆಗೆ ನಮ್ಮ ಮನಸ್ಸು ಪವಿತ್ರವಾಗುತ್ತದೆ. ಮಾಡುವ ಪ್ರತಿಯೊಂದು ಸೇವೆಯನ್ನು ಭಗವಂತನ ಸೇವೆಯಂದು ಮಾಡಬೇಕು ಎಂದು ತಿಳಿಸಿದರು.
ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜೀವನದಲ್ಲಿ ಎಷ್ಟೇ ಆಸ್ತಿ, ಐಶ್ವರ್ಯ ಇದ್ದರೂ, ಆರೋಗ್ಯವಿಲ್ಲದಿದ್ದರೆ ಜೀವನವೇ ಶೂನ್ಯ. ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಲು ಜಾಗೃತರಾಗಿ, ಸಾಮಾಜಿಕ ಕಳಕಳಿ ಹೊಂದುವ ಮೂಲಕ ಸಮರ್ಪಣಾ ಭಾವದಿಂದ ಕಾರ್ಯ ಮಾಡಬೇಕು. ವಾಣಿಜ್ಯೀಕರಣಗೊಂಡಿರುವ ಕಾಲದಲ್ಲಿಯೂ ಅನೇಕ ವೈದ್ಯರು ಸೇವೆ ಸಲ್ಲಿಸುತ್ತಿರುವುದು ಉತ್ತಮ ಕೆಲಸ ಎಂದು ಪ್ರಶಂಶಿಸಿದರು.
ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಬೇಕು. ನಮ್ಮ ಮೂಲ ಧರ್ಮ, ಸಂಸ್ಕೃತಿ-ಸಂಸ್ಕಾರದ ಪಾಠ ಹೇಳಿಕೊಡಬೇಕು. ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತಿ ನೀಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ವೈದ್ಯರು ಕರ್ತವ್ಯ ನಿರ್ವಹಿಸಲು ಜಾಗೃತರಾಗಬೇಕು. ಸಾಮಾಜಿಕ ಕಳಕಳಿ ಹೊಂದಬೇಕು. ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಹಿಂದಿನ ಪೇಜಾವರ ಶ್ರೀಗಳ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗೆ,ೀ ಸ್ವಾಮೀಜಿ ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗೋಣ. ಸಮಯವನ್ನು ವ್ಯರ್ಥ ಮಾಡದೆ ಸಾಕಷ್ಟು ಸೇವೆ ಮಾಡುವ ಮೂಲಕ ಮಾನವ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ತಿಳಿಸಿದರು.
ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ಡಾ.ರಘುರಾಮ್ ಭಟ್ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆದಿಚುಂಚನಗಿರಿ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಎಂ.ಎ.ಶೇಖರ್, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಆಯುರ್ವೇದ ತಜ್ಞ ಡಾ.ಬಿ.ಗುರುಬಸವರಾಜ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಮ್ಯಾ ಅಶೋಕ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ರವಿಚಂದ್ರ ಕುಲಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಕೃಷ್ಣದಾಸ್ ಪುರಾಣಿಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net