ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ

Photo 1.1
Published on

ಹೊಳೆನರಸೀಪುರ:ಗ್ರಾಮೀಣ ಭಾಗದ ಜನತೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಸೆಲ್ವಕುಮಾರ್ ಸಲಹೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹನುಮನಹಳ್ಳಿಯ ಸಮುದಾಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಶಿಬಿರ ಮತ್ತು ರಕ್ತದ ಗುಂಪು ತಪಾಸಣಾ ಶಿಬಿರವನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡವೇ ನಿಮ್ಮ ಗ್ರಾಮಕ್ಕೆ ಬಂದು ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿದ್ದೇವೆ. ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಶಿಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ.ಸುತೀಶ್‌ಕುಮಾರ್ ಮಾತನಾಡಿ, ದಾನ ದಾನಗಳಲ್ಲಿ ನೇತ್ರ ದಾನ ಅತ್ಯಂತ ಶ್ರೇಷ್ಠ ದಾನ. ಆದ್ದರಿಂದ ಸ್ವತಃ ನಾವೇ ನೋಂದಣಿ ಮಾಡಿಕೊಳ್ಳಬಹುದು. ಯಾರಿಗೆ ಅವಶ್ಯಕತೆಯಿದೆ ಅವರಿಗೆ ನಾಲ್ಕರಿಂದ ಆರು ಗಂಟೆಯೊಳಗೆ ನೇತ್ರದಾನ ಮಾಡಬಹುದಾಗಿದೆ. ಅಂತರ್ಜಾಲದ ಮೂಲಕವೂ ನೋಂದಣಿ ಮಾಡಿಕೊಂಡು ನೇತ್ರದಾನ ಮಾಡಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮನಃಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ, ಆರೋಗ್ಯ ಸಂಪತ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆರೋಗ್ಯವಿದ್ದರೆ ಸಕಲ ಐಶ್ವರ್ಯವೂ ನಮ್ಮದಾಗಿರುತ್ತದೆ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅದರಂತೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂದರು.

ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ.ಅಶ್ವತಿಕುಮಾರಿ, ಸರ್ಜನ್ ಡಾ.ಅಮಿನಾ ಗಜಲ್ ಖಾನ್, ಭಾರತೀಯ ರೆಡ್‌ಕ್ರಾಸ್ ಸಭಾಪತಿ ಆರ್.ಬಿ.ಪುಟ್ಟೇಗೌಡ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಕಾರ್ಯಕ್ರಮಾಧಿಕಾರಿ ಡಾ.ಯು.ಎಚ್.ಆಶಾಜ್ಯೋತಿ ಮಾತನಾಡಿದರು.

ಸಹ ಪ್ರಾಧ್ಯಾಪಕಿ ಪಕೀರಮ್ಮ, ಹಂಗರಹಳ್ಳಿ ವೈದ್ಯಾಧಿಕಾರಿ ಡಾ.ಬಿ.ಟಿ.ಗೋಪಿನಾಥ್, ಆರೋಗ್ಯ ಸುರಕ್ಷತಾಧಿಕಾರಿ ಕೆ.ಸಿ.ಗಂಗಾ, ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ಅರುಣಾಕ್ಷಿ, ಆಶಾ ಕಾರ್ಯಕರ್ತೆ ರೇವಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net