

ಆಲೂರು: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಶಿಬಿರದ ಉಚಿತ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.
ತಾಲೂಕಿನ ರಾಯರ ಕೊಪ್ಪಲು ಗ್ರಾಮದಇನ್ಸ್‌ಪೈರ್ ಶಾಲೆಯ ಆವರಣದಲ್ಲಿ ಆದಿ ಚುಂಚನಗಿರಿ ಮಠ, ರಾಧಮ್ಮ ಜನಸ್ಪಂದನ, ಸರ್ಕಾರಿ ಜಿಲ್ಲಾಸ್ಪತ್ರೆ, ಸ್ಪರ್ಷ್ ಹಾಸ್ಪಿಟಲ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಣವಿರುವವರು ಶ್ರೀಮಂತರಲ್ಲ, ಆರೋಗ್ಯ ಇರುವವರೇ ನಿಜವಾದ ಶ್ರೀಮಂತರು. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆರ್ಥಿಕ ತೊಂದರೆಯಿಂದಾಗಿ ಜನರು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನಕಲಿ ಔಷಧಗಳು ಮಾರುಕಟ್ಟೆಗೆ ಕಾಲಿಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದ ಜನರು ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿರುವುದಿಲ್ಲ. ಇಂತಹ ಶಿಬಿರಗಳನ್ನು ಹೆಚ್ಚು ಉಪಯುಕ್ತವಾಗಿವೆ ಎಂದರು.
ಜಿಪಂ ನಿವೃತ್ತ ಸಿಇಒ ಪರಮೇಶ್ ಮಾತನಾಡಿ, ಗ್ರಾಮೀಣ ಭಾಗದ ಯುವಕನೊಬ್ಬ ತನ್ನ ತಾಯಿಯ ಹೆಸರಿನಲ್ಲಿ ಸಮಾಜ ಸೇವೆಗೆ ಮುಂದಾಗುತ್ತಿರುವುದು ಆದರ್ಶ ಸಮಾಜದ ನಿರ್ಮಾಣಕ್ಕೆ ಮಾದರಿಯಾಗಿದೆ. ಎಲ್ಲ ಯುವಕರು ಈ ರೀತಿಯ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಡಾ. ರಾಜಶೇಖರ್ ಮಾತನಾಡಿ, ಯಾವುದೇ ಕಾಯಿಲೆ ಗುಣ ಲಕ್ಷಣಗಳನ್ನು ತಿಳಿಯಲು ಹಾಗೂ ಪ್ರಾಥಮಿಕ ರೋಗದ ಹಂತವನ್ನು ಕಂಡು ಹಿಡಿಯಲು ಇಂತಹ ಶಿಬಿರಗಳು ಮಹತ್ವವಾಗಿವೆ. ಗ್ರಾಮೀಣ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಧಮ್ಮ ಜನಸ್ಪಂದನ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ನಾನು ಸಮಾಜ ಸೇವೆ ಮಾಡಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ತೀರ್ಮಾನಿಸಿದ್ದು, ಆದಿ ಚುಂಚನಗಿರಿ ಸ್ವಾಮೀಜಿ ನಿರ್ಮಲಾನಂದ ಸ್ವಾಮೀಜಿ, ಶಂಭುನಾಥ ಸ್ವಾಜೀಜಿಯವರ ಆಶೀರ್ವಾದ ಹಾಗೂ ಹಿರಿಯರ ಮಾರ್ಗದರ್ಶನ, ಆಸ್ಪತ್ರೆಗಳ ಸಹಕಾರದಿಂದ ಇಂತಹ ಹಲವು ಸೇವೆ ಸಲ್ಲಿಸಲು ಅವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇನ್ಸ್‌ಪೈರ್ ಶಾಲಾ ಮುಖ್ಯಸ್ಥ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ನ್ಯೂರೋ ಸರ್ಜನ್ ಡಾ.ಹರ್ಷ ಡಾ. ಸುರೇಶ್, ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಕಾರಗೋಡು ಗ್ರಾಮ ಪಂಚಾಯಿತಿ ಪಿಡಿಒ ಸಣ್ಣಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ , ಶ್ರೀಕಾಂತ್, ಶಿವಕುಮಾರ್ ಇತರರು ಇದ್ದರು.