

ಬೆಟ್ಟದಪುರ: ಮನುಷ್ಯನಿಗೆ ಕಣ್ಣು ಪ್ರಮುಖ ಅಂಗವಾಗಿದ್ದು, ಇದರ ಆರೈಕೆ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸಲಹೆ ನೀಡಿದರು.
ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಉಚಿತ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಪಿರಿಯಾಪಟ್ಟಣ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿ, ಜನವರಿಯಲ್ಲಿ 670 ಜನರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ, 132 ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಅದರಂತೆ ಈ ಬಾರಿಯೂ ಅವಶ್ಯಕತೆ ಇರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಸುಮಾರು 350 ಜನಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಮಾಡಲಾಯಿತು. ಕಣ್ಣಿನ ಸಮಸ್ಯೆ ಇರುವ 80 ರೋಗಿಗಳಿಗೆ ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರಲ್ಲಿ ಉಚಿತ ಶಸ್ತ್ರಚಿಕಿತ್ಸೆ ನೀಡುವುದಕ್ಕೆ ನೋಂದಣಿ ಮಾಡಿಕೊಳ್ಳಲಾಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೈಲಾರಿ, ಪ್ರಧಾನ ಕಾರ್ಯದರ್ಶಿ ಅರುಣ್ ರಾಜೇ ಅರಸ್, ಮುಖಂಡರಾದ ಸುನೀಲ್‌ಕುಮಾರ್, ಸುಂದರ್, ಕಿರಣ್, ಜಯರಾಮೇಗೌಡ ಇದ್ದರು.