ಆರೋಗ್ಯಕ್ಕೆ ಬೇಕು ಸ್ವಚ್ಛತೆ, ಪೌಷ್ಠಿಕ ಆಹಾರ

ctd 12 health camp-03
Published on

ಚಿತ್ರದುರ್ಗ: ವೈಯಕ್ತಿಕ ಸ್ವಚ್ಛತೆಯೊಂದಿಗೆ ಪೌಷ್ಠಿಕ ಆಹಾರ ಸೇವನೆ ಕಡೆ ಗಮನಹರಿಸುವಂತೆ ಸ್ವಚ್ಛತಾ ಕಾರ್ಮಿಕರಿಗೆ ತಾಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.
ಆರೋಗ್ಯ ಇಲಾಖೆ, ಹಸಿರು ದಳ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಮಿಕರು ಮತ್ತು ಕೊಳಗೇರಿ ನಿವಾಸಿಗಳಿಗೆ ಮಾರುತಿ ನಗರದ ವೆಂಕಟೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಗುಟ್ಖಾ, ತಂಬಾಕು, ಪಾನ್‌ಪರಾಗ್, ಮದ್ಯ, ಧೂಮಪಾನದಿಂದ ದೂರವುಳಿದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಸ್ವಚ್ಛತಾ ಕಾರ್ಯದ ವೇಳೆ ಸುರಕ್ಷಿತ ಪರಿಕರಗಳನ್ನು ಬಳಸಬೇಕು. ಪೌಷ್ಠಿಕ ಆಹಾರ ಸೇವನೆ ಜತೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲೂ ಗಮನಹರಿಸಬೇಕು ಎಂದು ಹೇಳಿದರು.
ಸ್ವಚ್ಛತಾ ಕಾರ್ಮಿಕರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಬೇಕು. ಇದರಿಂದ ಉನ್ನತ ಮಟ್ಟದ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದರು.
ಶಿಬಿರದಲ್ಲಿ ನೇತ್ರ, ಬಾಯಿ ಕ್ಯಾನ್ಸರ್, ಬಿಪಿ, ಸಕ್ಕರೆ ಇತ್ಯಾದಿ ರೋಗಗಳ ತಪಾಸಣೆ ನಡೆಸಿ ಅಗತ್ಯವುಳ್ಳವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಲಾಯಿತು.
ಡಾ.ಪ್ರಜ್ವಲ್, ಡಾ.ಅದಿತಿ, ಡಾ.ಸುಪ್ರೀತಾ, ಡಾ.ಮಂಜುಳಾ, ನೇತ್ರಾಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಗಂಗಾಧರ್, ನಂದೀಶ್, ಆಶಾ, ಉಷಾ, ಹಸಿರು ದಳ ಸೇವಾ ಸಂಸ್ಥೆಯ ಪ್ರಮುಖ ಜಿಲಾನಿ ಮುಬಾರಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net