ಆರೋಗ್ಯಕ್ಕೆ ಜಂಕ್‌ಫುಡ್‌ಗಳು ಮಾರಕ

20krp-01
Published on

ಕೆ.ಆರ್.ಪೇಟೆ: ಯುವ ಜನರು ಜಂಕ್‌ಫುಡ್‌ಗಳನ್ನು ತಿನ್ನುತ್ತಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪ್ರಾಂಶುಪಾಲ ಸಿ.ಆರ್.ದಿನೇಶ್ ಹೇಳಿದರು.


ತಾಲೂಕಿನ ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದೇಸಿ ತಿನಿಸು ಹಾಗೂ ಉಡುಪುಗಳ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನೆಲದ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಪೂರಕವಾಗಿವೆ. ಹಾಗಾಗಿ ಎಲ್ಲರೂ ದೇಸಿ ತಿನಿಸುಗಳಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಸಾವಯವ ಗೊಬ್ಬರಗಳಿಂದ ಬೆಳೆಯುವ ರಾಗಿ ಹಾಗೂ ಸಿರಿಧಾನ್ಯಗಳ ಮಹತ್ವ ಹಿಂದೆಂದಿಗಿಂತಲೂ ಇಂದು ಹೆಚ್ಚು ಗೋಚರವಾಗ ತೊಡಗಿವೆ. ಹಲವು ಕಾಯಿಲೆಗಳಿಗೆ ರಾಮಬಾಣವಾಗಿವೆ. ವೈದ್ಯರೂ ಇವುಗಳ ಬಳಕೆಗೆ ಸಲಹೆ ನೀಡುತ್ತಿದ್ದಾರೆ. ಇವುಗಳ ರುಚಿ ಕಹಿ ಎನಿಸಿದರೂ ಉದರಕ್ಕೆ ಸಿಹಿಯಾಗಿವೆ. ಇಂಥ ಆಹಾರ ಸೇವಿಸುವುದರ ಮೂಲಕ ಆರೋಗ್ಯಕರವಾಗಿರುವಂತೆ ಹೇಳಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಉಪನ್ಯಾಸಕ ಎಚ್.ಎನ್.ರಂಗರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನುಂಟು ಮಾಡಿ, ಆರೋಗ್ಯವಂತ ಪ್ರಜೆಗಳಾಗಿ ಹೊರಹೊಮ್ಮಲು ಕಾರ್ಯಕ್ರಮ ಸಹಾಯಕವಾಗುತ್ತದೆ ಎಂದು ತಿಳಿಸಿದರು.


ದೇಸಿ ಉಡುಪುಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು. ಹಿರಿಯರ ಮಾರ್ಗದರ್ಶನದಲ್ಲಿ ತಾವು ಸಿದ್ಧಪಡಿಸಿಕೊಂಡು ತಂದಿದ್ದ ಬಗೆಬಗೆಯ ತಿನಿಸುಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ದೇಸಿ ತಿನಿಸುಗಳನ್ನು ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net