

ಚಿತ್ರದುರ್ಗ: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಸ್ತು ಮತ್ತು ಕೌಶಲದ ಪಾತ್ರ ಮಹತ್ವದ್ದಾಗಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ರಾಜ್ಯಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯವಿದೆ. ಹಾಗಾಗಿ ಎಲ್ಲ ಶಾಲೆಗಳ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರಲು ಮುಂದಾಗಬೇಕು. ಇದರಿಂದ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವು ಬೆಳೆಯುತ್ತದೆ. ಪರಿಸರ ಜಾಗೃತಿ, ಸ್ವಚ್ಛತೆ, ಶಿಸ್ತು ಮತ್ತು ಸಂಯಮ ಹಾಗೂ ನಾಯಕತ್ವ ಗುಣ ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಇದರ ಪಾತ್ರ ಹಿರಿದಾಗಿದೆ ಎಂದು ತಿಳಿಸಿದರು.
ಪರಿಸರ ರಕ್ಷಣೆಗೆ ಅಧಿಕಾರಿ, ನೌಕರರು ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಸಂತೋಷ ಸಿಗಲು ಸಾಧ್ಯವಿದೆ. ನಮ್ಮ ಕುಟುಂಬದವರು ಸಹ ವಿದ್ಯಾಭ್ಯಾಸದ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.
ನಮ್ಮ ಜಿಲ್ಲೆಯಲ್ಲಿ 44000 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿದ್ದು, ಈ ಪೈಕಿ 244 ಮಂದಿ ರಾಜ್ಯಪಾಲರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಬೇಕೆಂದು ಸೋಮಶೇಖರ್ ಶುಭ ಹಾರೈಸಿದರು.
ಜಿಲ್ಲಾ ಗೈಡ್ಸ್ ಆಯುಕ್ತೆ ಎಲ್. ಸವಿತಾ ಶಿವಕುಮಾರ್, ಜಿಲ್ಲಾ ಸ್ಥಾನಿಕ ಆಯುಕ್ತ ಅನಂತ್‌ರೆಡ್ಡಿ, ಜಂಟಿ ಕಾರ್ಯದರ್ಶಿ ಡಾ. ರೆಹಮತ್‌ಉಲ್ಲಾ, ಜಿಲ್ಲಾ ರೋವರ್ಸ್ ಅಧಿಕಾರಿ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಶೀಲಾ ಮಂಜುನಾಥ್, ಡಾನ್‌ಬಾಸ್ಕೋ ಶಾಲೆಯ ಬಷೀರ್, ಇತರರು ಇದ್ದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಜನ
ರಾಜ್ಯಪಾಲರ ಪ್ರಶಸ್ತಿಗೆ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಚಿತ್ರದುರ್ಗ ಎಸ್‌ಆರ್‌ಎಸ್ ಹೆರಿಟೇಜ್, ಡಾನ್ ಬಾಸ್ಕೋ, ವಿದ್ಯಾವಿಕಾಸ ವಿದ್ಯಾಸಂಸ್ಥೆ, ವಾಸವಿ, ಭರಮಸಾಗರದ ಡಿವಿಎಸ್, ಹೊಳಲ್ಕೆರೆ ವಾಗ್ದೇವಿ ಹಾಗೂ ಶಾರದಾ ನ್ಯಾಷನಲ್ ಶಾಲೆಗಳ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿದ್ದಾರೆ.