

ಚಿತ್ರದುರ್ಗ: ಆರೋಗ್ಯಕರ ಬೆಳವಣಿಗೆಗೆ ರಂಗಭೂಮಿ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳ ಅತಿರೇಕಗಳೆಡೆ ಬೇಸರ ಹೊಂದಿ ಜನರು ಮತ್ತೆ ರಂಗಭೂಮಿಯತ್ತ ವಾಲುತ್ತಿರುವುದು ಉತ್ತಮ ಬೆಳವಣಿಗೆ ಎಂದು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿ ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘದ ಆಶ್ರಯದಲ್ಲಿ ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ, ಮಕ್ಕಳ ಕಲರವ ಮತ್ತು ಶಿವಸಂಚಾರ ನಾಟಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಉತ್ತಮ ಬಾಂಧವ್ಯಕ್ಕೆ ರಂಗಭೂಮಿ ಸಹಕಾರಿ. ಒಂದು ನಾಟಕದ ವೀಕ್ಷಣೆ ಹಲವು ಪುಸ್ತಕಗಳನ್ನು ಓದಿದ ಅನುಭವ ನೀಡುತ್ತದೆ ಎಂದರು.
ನಾಟಕೋತ್ಸವ ಉದ್ಘಾಟಿಸಿದ ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಭವಿಷ್ಯದ ಪೀಳಿಗೆಗೆ ಸಾಹಿತ್ಯ, ಸಾಂಸ್ಕೃತಿಕ ಮತ್ತು ನಾಟಕಗಳ ಅಭಿರುಚಿ ಬೆಳೆಸಬೇಕಿದೆ. ನಾಟಕಗಳು ಪ್ರತಿಯೊಬ್ಬರ ಆಂತರಿಕ ಮನೋಧರ್ಮಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ ವೀರೇಶ್ ಮಾತನಾಡಿದರು. ಇತಿಹಾಸ ಸಂಶೋಧಕ ಡಾ.ಬಿ.ರಾಜ ಶೇಖರಪ್ಪ, ನಾಟಕಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಶಿಕ್ಷಣ ಸಂಸ್ಥೆ ನಿರ್ದೇಶಕ ಕೆ.ಎಂ.ಚೇತನ್, ಗ್ರಾ.ಪಂ ಸದಸ್ಯೆ ಜ್ಯೋತಿ ದೇವೇಂದ್ರಪ್ಪ, ಷಡಾಕ್ಷರಯ್ಯ, ಕೆಪಿಎಂ ಗಣೇಶಯ್ಯ, ಪ್ರೊ.ಎಂ.ಆರ್. ಜಯಲಕ್ಷ್ಮಿ, ಶೋಭಾ ಮಲ್ಲಿಕಾರ್ಜುನ್, ಶೈಲಜಾಬಾಬು ಇದ್ದರು.
ದಾವಣಗೆರೆಯ ಸಂಗೀತ ವಿದ್ವಾನ್ ಆನಂದಕುಮಾರ್ ಪಾಟೀಲ್ ಹಿಂದೂಸ್ತಾನಿ ಸಂಗೀತಗಾಯನ ಪ್ರಸ್ತುತಪಡಿಸಿದರು. ನಾಟಕಕಾರ ಬಿ.ಆರ್.ಪೊಲೀಸ್ ಪಾಟೀಲ್ ವಿರಚಿತ, ವಿಶ್ವೇಶ್ವರೀ ಹಿರೇಮಠ ನಿರ್ದೇಶನದ ತುಲಾಭಾರ ನಾಟಕವನ್ನು ಸಾಣೇಹಳ್ಳಿ ಶಿವಸಂಚಾರದ ಕಲಾವಿದರು ಅಭಿನಯಿಸಿದರು.