

ನೆಲಮಂಗಲ: ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆ ನಿರ್ಮಿಸಲಾಗಿದೆ. ಇದರಲ್ಲಿ ಹಣ ಮಾಡುವ ಉದ್ದೇಶವಿಲ್ಲ ಎಂದು ಶಾಸಕ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ತಾಲೂಕಿನ ಟಿ. ಬೇಗೂರು ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬುಧವಾರ ವಿವಿಧ ಚಿಕಿತ್ಸಾ ಉಪಕರಣಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆ ಈ ಭಾಗದ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಬೆಳೆಯಬೇಕು ಎಂಬ ಮುಖ್ಯ ಉದ್ದೇಶದಿಂದ ನಮ್ಮ ತಂದೆ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅವರ ಉದ್ದೇಶ ಸಫಲವಾಗಬೇಕಾದರೆ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳನ್ನು ರೋಗಿಗಳು ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಸಂಸ್ಥೆಯಲ್ಲಿ ಎಂಬಿಬಿಎಸ್ ಮಾಡಿದ್ದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ವೈದ್ಯರಾಗಿದ್ದು, ಸಂಸ್ಥೆಯ ಕೀರ್ತಿಯನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರೊನಾ ಸಂದರ್ಭದಲ್ಲಿ ಸಿಟಿ ಸ್ಕ್ಯಾನಿಂಗ್ ಹೆಸರಿನಲ್ಲಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದುದನ್ನು ಮನಗಂಡು ಕಡಿಮೆ ದರದಲ್ಲಿ ಸಿಟಿ ಸ್ಕಾೃನಿಂಗ್ ಸೌಲಭ್ಯ ಕಲ್ಪಿಸಲಾಯಿತು. ಜತೆಗೆ ಸರ್ಕಾರದಿಂದ 14 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಇಎಸ್‌ಐ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಎಬಿಆರ್ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡರೇ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲಾಡಳಿತ ಆರಂಭಿಸಿದ್ದ ಮೊಬೈಲ್ ಕ್ಲಿನಿಕ್ ಸೇವೆಯಲ್ಲಿ ಆಸ್ಪತ್ರೆಯ ನೂರಾರು ವಿದ್ಯಾರ್ಥಿಗಳು ಹಾಗೂ 20ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು ಎಂದರು.
ಆಮ್ಲಜನಕ ಘಟಕ ಸ್ಥಾಪನೆ: ಉಸಿರಾಟ ಸಮಸ್ಯೆ ಹೊಂದಿರುವವರಿಗೆ ಆಮ್ಲಜನಕ ಮುಖ್ಯ. ಕರೊನಾ 2ನೇ ಅಲೆಯಲ್ಲಿ ಆಮ್ಲಜನಕ ಸಿಗದೆ ನೂರಾರು ಮಂದಿ ಮೃತಪಟ್ಟರು. ಇದನ್ನು ಮನಗಂಡು ಸಿದ್ಧಾರ್ಥ ಆಸ್ಪತ್ರೆಯಲ್ಲಿ 15 ದಿನಗಳ ಒಳಗೆ 2 ಟನ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಜತೆಗೆ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಹಾರ್ಟ್ ಸೆಂಟರ್ ಆರಂಭಿಸಲಾಗಿದ್ದು, ನಿತ್ಯ ಒಂದು ತೆರೆದ ಹೃದಯ ಶಸಚಿಕಿತ್ಸೆ ನಡೆಸಲಾಗುತ್ತಿದೆ. ಶಿವಮೊಗ್ಗ ಬಿಟ್ಟರೆ ಬೆಂಗಳೂರು ನಗರದವರೆಗೆ ಯಾವುದೇ ಹಾರ್ಟ್ ಸೆಂಟರ್ ಇಲ್ಲ. ಆದ್ದರಿಂದ ಮುಂದಿನ ವರ್ಷದೊಳಗಾಗಿ ತಾಲೂಕಿನಲ್ಲಿ ಕೂಡ ತೆರೆದ ಹೃದಯ ಶಸ್ತ್ರಚಿಕಿತ್ಸೆ ಕೇಂದ್ರ ಆರಂಭಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಪರಮೇಶ್ವರ್ ಸಿಎಂ ಆಗಲಿ: ಪಕ್ಷಾತೀತ ಮತ್ತು ಜಾತ್ಯತೀತವಾಗಿ ಬಡವರ ಪರವಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಡಾ. ಜಿ. ಪರಮೇಶ್ವರ್ ಮಾಡಿದ್ದಾರೆ. 120ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಆರಂಭಿಸಿ, ಲಕ್ಷಾಂತರ ಜನರ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಡಿಸಿಎಂ ಆಗಿ, ಗೃಹ, ಶಿಕ್ಷಣ ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿ, ರಾಜಕೀಯ ಅನುಭವ ಪಡೆದುಕೊಂಡಿದ್ದಾರೆ. ಆದ್ದರಿಂದ ಇವರನ್ನು ಮುಖ್ಯಮಂತ್ರಿ ಮಾಡಿದರೆ ಇನ್ನಷ್ಟು ಉತ್ತಮ ಸೇವೆ ಮಾಡುತ್ತಾರೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ.ಡಿ.ಎಸ್.ವಾಸುದೇವ, ಉಪಪ್ರಾಂಶುಪಾಲ ಡಾ. ಶ್ರೀನಿವಾಸ್, ತುಮಕೂರು ಶ್ರೀ ಸಿದ್ಧಾರ್ಥ ಕಾಲೇಜು ಉಪಕುಲಪತಿ ಡಾ. ಬಾಲಕೃಷ್ಣ ಪಿ.ಶೆಟ್ಟಿ, ಮುಖ್ಯ ಕಾರ್ಯನಿರ್ವಾಕ ಡಾ. ಪಿ.ಕೆ. ದೇವದಾಸ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸುದೀಪ್, ವೈದ್ಯಕೀಯ ಅಧೀಕ್ಷಕ ಡಾ. ಮನೋಹನ್ ಮತ್ತಿತರರಿದ್ದರು.