

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ವೈಜ್ಞಾನಿಕ ಯುಗದಲ್ಲಿ ವೈದ್ಯರನ್ನು ದೇವರೆಂದು ತಿಳಿದ ಜನರಿದ್ದಾರೆ. ಮಾನವೀಯ ದೃಷ್ಟಿಯಿಂದ ಚಿಕಿತ್ಸೆ ನೀಡುವ ವೈದ್ಯರು ಈಗಲೂ ಇದ್ದಾರೆ ಎಂದು ಹೃದಯರೋಗ ತಜ್ಞ ಡಾ. ಮಹಮ್ಮದ ಇಕ್ಬಾಲ ಶೇಖ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಅನ್ನಪೂರ್ಣಮ್ಮ ಸಿದ್ಧಲಿಂಗಶಾಸ್ತ್ರಿ ಹಿರೇಮಠ ದತ್ತಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಆರೋಗ್ಯ ಸೇವಾರತ್ನ ಪ್ರಶಸ್ತಿ-2023 ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರ ತುಂಬ ಸಂಕೀರ್ಣವಾಗಿದ್ದು, ಯಾಂತ್ರೀಕೃತವಾಗಿದೆ. ಇಡೀ ಕ್ಷೇತ್ರ ವಾಣಿಜ್ಯಕರಣಗೊಂಡಿದೆ. ಆದರೆ ಡಾ. ನಾಗಲೋಟಿಮಠ, ಡಾ. ಕರ್ಪೂರಮಠ ಅಂತಹ ವೈದ್ಯರು ನೀಡಿದ ಸಂಸ್ಕಾರದಿಂದ ಸಾಕಷ್ಟು ವೈದ್ಯರು ಜೀವಪರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ರೋಗ ಲಕ್ಷಣ ತಜ್ಞ ಡಾ. ಉಮೇಶ್ವರ ಹಳ್ಳಿಕೇರಿ ಆರೋಗ್ಯ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು. ರಕ್ತ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತಾಗಬೇಕು. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದ ಅವರು, ಕ್ಯಾನ್ಸರ್ ಸಾಧ್ಯತೆ, ಸವಾಲು ಕುರಿತು ವಿವರಿಸಿದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಮಹೇಶ ಹೊರಕೇರಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಸುರೇಶ ಹೊರಕೇರಿ, ಸಿ.ಯು. ಬೆಳ್ಳಕ್ಕಿ, ಎಸ್.ಎಸ್. ಚಿಕ್ಕಮಠ, ಕೆ.ಎಚ್. ನಾಯಕ, ಎಸ್.ಕೆ. ಕುಂದರಗಿ, ಮಲ್ಲಾಪುರಮಠ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.