ಆರೋಗ್ಯ ಸಹಾಯಕಿಯರಿಂದ ಪ್ರತಿಭಟನೆ

28HSN1
Published on

ಹಾಸನ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಕಾಯಂಗೊಳಿಸಿ ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಆರೋಗ್ಯ ಸಹಾಯಕಿಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೊರಗೆ ಬಿಳಿ ಬಟ್ಟೆ ಒಳಗೆ ಖಾಲಿ ಹೊಟ್ಟೆ, ಆಶ್ವಾಸನೆ ಬೇಡ ಪರಿಹಾರ ಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಘೋಷ ವಾಕ್ಯಗಳ ಮೂಲಕ ಸರ್ಕಾರವನ್ನು ಎಚ್ಚರಿಸಿದರು.

ಮಾರಕ ಕರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾರಗಟ್ಟಲೆ ಮನೆ ಹಾಗೂ ಕುಟುಂಬ ಸದಸ್ಯರಿಂದ ದೂರವಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ಸರ್ಕಾರ ಆಶಾ ಕಾರ್ಯಕರ್ತೆಯರು ಮಾತ್ರ ಪ್ರಾಮಾಣಿಕ ಸೇವಕರೆಂದು ಬಿಂಬಿಸುತ್ತಿದೆ ಎಂದು ಆರೋಪಿಸಿದರು.

ಕರ್ತವ್ಯ ವೇಳೆ ಕರೊನಾ ತಗುಲಿದರೆ ನಮ್ಮ ಆರೈಕೆಗೆ ಯಾರೂ ಬರುವುದಿಲ್ಲ. ಸೇವೆಗೆ ಸೇರಿದಾಗಿನಿಂದ ಕೇವಲ 8,500 ರೂ.ಸಂಬಳ ಪಡೆಯುತ್ತಿದ್ದೇವೆ. ಕಾಯಂ ವೈದ್ಯರಷ್ಟೇ ಶ್ರಮವಹಿಸಿ ಕೆಲಸ ಮಾಡುವ ನಮಗೂ ಇತರ ಸೌಲಭ್ಯ ಕಲ್ಪಿಸಬೇಕು. ಕೋವಿಡ್-19 ವೇಳೆ ವಿಶೇಷ ಸೇವೆ ಸಲ್ಲಿಸಿರುವುದಕ್ಕೆ ಸಹಾಯಧನ ಘೋಷಿಸಬೇಕು ಎಂದು ಆಗ್ರಹಿಸಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಸೌಮ್ಯಾ, ಬೃಂದಾ, ಚೈತ್ರಾ, ರೋಹಿನ್ ತಾಜ್, ಪೂಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net