ಆರೋಗ್ಯ ಸಮಸ್ಯೆ ತಡೆಗೆ ಪೌಷ್ಟಿಕ ಆಹಾರ ರಾಮಬಾಣ

01HBD01
ಚಿಟಗುಪ್ಪದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಏರ್ಪಡಿಸಿದ್ದ ಪೌಷ್ಟಿಕ ಆಹಾರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಾವಯವ ಕೃಷಿ ಪರಿವಾರದ ಸಂಗಮೇಶ ಜವಾದಿ ಉದ್ಘಾಟಿಸಿದರು. ಯೋಜನಾಧಿಕಾರಿ ವೀರೇಶ್, ಆರೋಗ್ಯ ಇಲಾಖೆ ಆಪ್ತ ಸಮಾಲೋಚನಾ ಅಧಿಕಾರಿ ಗೀತಾ ಇತರರಿದ್ದರು.
Published on

ಚಿಟಗುಪ್ಪ: ಪೌಷ್ಟಿಕ ಆಹಾರ ಜೀವಕೋಶ ಮತ್ತು ಜೀವಿಗಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದರ ಜತೆಗೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳ ತಡೆಗೆ ಪೌಷ್ಟಿಕ ಆಹಾರ ರಾಮಬಾಣದಂತೆ ಸಹಾಯ ಮಾಡುತ್ತದೆ ಎಂದು ಸಾವಯವ ಕೃಷಿ ಪರಿವಾರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಜವಾದಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದಡಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ದೇಹದ ಬೆಳವಣಿಗೆ, ಕಾರ್ಯನಿರ್ವಹಣೆ ಮತ್ತು ದುರಸ್ತಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ ರೋಗನಿರೋಧಕ ಶಕ್ತಿ ಬಲಪಡಿಸಿ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದರು.

ಗೋಧಿ, ಅಕ್ಕಿ, ಜೋಳ, ಬೇಳೆಕಾಳು, ಹಸಿರೆಲೆ ಮತ್ತು ಬೇರು ತರಕಾರಿ, ಹಣ್ಣು, ಧಾನ್ಯ, ಹಾಲು-ಮೊಸರು ಪ್ರತಿದಿನ ಬಳಸಬೇಕು. ನಿಯಮಿತ ಸಮತೋಲಿತ ಆಹಾರ ಸೇವಿಸಬೇಕು. ಹೆಚ್ಚಾಗಿ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯ ಉಪಯೋಗಿಸಿದರೆ ಆರೋಗ್ಯಕ್ಕೆ ಉತ್ತಮ. ಕಡ್ಡಾಯವಾಗಿ ಆಹಾರ ತಜ್ಞರ ಸಲಹೆ ಪಡೆಯಬೇಕು. ಒಟ್ಟಾರೆ ಪೌಷ್ಟಿಕ ಆಹಾರ ಸೇವನೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯುತ್ತಮ ಎಂದು ಹೇಳಿದರು.

ಯೋಜನಾಧಿಕಾರಿ ವೀರೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಬಾಲ್ಯದಿಂದ ವೃದ್ಧಾಪ್ಯವರೆಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಅದರಲ್ಲೂ ಹೆಣ್ಮಕ್ಕಳಿಗೆ ಹೆಚ್ಚಿನ ಪೋಷಕಾಂಶ ಬೇಕು. ದೇಹಕ್ಕೆ ಬೇಕಾಗುವಷ್ಟು ಆಹಾರ ಸೇವನೆ ಮಾಡದಿದ್ದರೆ ಕೆಲಸ ಮಾಡಲು ಮತ್ತು ಓಡಾಡಲು ಶಕ್ತಿ ಇರುವುದಿಲ್ಲ ಎಂದರು.

ದೇಹದ ಅಂಗಾಂಗ ಬೆಳವಣಿಗೆ ಜತೆಗೆ ಸುಸ್ಥಿತಿಯಲ್ಲಿರಲು ಪೌಷ್ಟಿಕ ಆಹಾರದ ಅಗತ್ಯದ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಗೃತಿ ಮೂಡಿಸುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಆಪ್ತ ಸಮಾಲೋಚನಾ ಅಧಿಕಾರಿ ಗೀತಾ ಮಾತನಾಡಿ, ಆಹಾರದಲ್ಲಿ ಪೌಷ್ಟಿಕಾಂಶ ಕೊರತೆಯಿಂದಾಗಿ ಹಲವು ರೋಗಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಪ್ರತಿದಿನ ತರಕಾರಿ, ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಆರೋಗ್ಯ ಸಮಸ್ಯೆ ಕಂಡಾಕ್ಷಣ ವೈದ್ಯರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಶಾಂತಾ ಆನಂದರಾಜ, ಪಲ್ಲವಿ ಪಾಟೀಲ್ ಇತರರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ನಾಗಶೆಟ್ಟಿ ಡೋರನಳ್ಳಿ ವಂದಿಸಿದರು.

ಆರೋಗ್ಯಕರ ಆಹಾರ ಎಲ್ಲ ರೀತಿಯ ಅಪೌಷ್ಟಿಕ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಸೇರಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದಲೂ ರಕ್ಷಿಸುತ್ತದೆ.

| ಸಂಗಮೇಶ ಜವಾದಿ ಪ್ರಧಾನ ಕಾರ್ಯದರ್ಶಿ, ಸಾವಯವ ಕೃಷಿ ಪರಿವಾರ ಬೀದರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net