

ಕಡೂರು: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಯಗಟಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 537ನೇ ಕನಕ ಜಯಂತ್ಯುತ್ಸವ ಅಂಗವಾಗಿ ಗುರುವಾರ ತಾಲೂಕು ಪ್ರದೇಶ ಕುರುಬರ ಸಂಘ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜೀವಿತಾ ೌಂಡೇಷನ್ ಮತ್ತು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಆರೋಗ್ಯ ಕಾಳಜಿಯಲ್ಲಿ ನಿರ್ಲಕ್ಷ್ಯತೋರಬಾರದು. ಸ್ವಚ್ಛತೆಯಿಂದಿರಬೇಕು ಎಂದು ಹೇಳಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ಡಿ.4ರಂದು ಯಗಟಿ ಗ್ರಾಮದಲ್ಲಿ ನಡೆಯುವ ಕನಕ ಜಯಂತಿ ಮಹೋತ್ಸವ ಅಂಗವಾಗಿ ಈಗಾಗಲೇ ರಕ್ತದಾನ ಶಿಬಿರ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ಆಯೋಜಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಗ್ರಾಮಾಂತರ ಭಾಗದ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಯಗಟಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ರವಿಕುಮಾರ್, ಕನಕ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ದೊಣ್ಣೇಕೋರನಹಳ್ಳಿ ಉಮೇಶ್, ಸ್ವಾಗತ ಸಮಿತಿ ಅಧ್ಯಕ್ಷ ಚನ್ನಪಿಳ್ಳೇ ಗೋವಿಂದಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಉಮೇಶ್, ಪುರಸಭೆ ಸದಸ್ಯ ಮರುಗುದ್ದಿ ಮನು, ಮುಖಂಡರಾದ ಕೆ.ಎಚ್.ಶಂಕರ್, ಕೊನೆಮನೆ ರವಿ, ತಾಲೂಕು ವಕ್ತಾರ ಕೆ.ಜಿ.ಲೋಕೇಶ್ವರ್, ಎನ್.ಎಚ್.ನಂಜುಂಡಸ್ವಾಮಿ, ಜೀವಿತಾ ಫೌಂಡೇಷನ್ ಅಧ್ಯಕ್ಷ ಕೆ.ಪ್ರಕಾಶ್ ಇತರರಿದ್ದರು.