ಆರೋಗ್ಯ, ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ

Published on

ಹೊಸಪೇಟೆ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸ್ವಾತಂತ್ರö್ಯ ನಂತರದಲ್ಲಿ ಮೊದಲ ಆದ್ಯತೆ ಪಡೆದು, ಸೇವಾ ಕ್ಷೇತ್ರಗಳೆಂದು ಗುರುತಿಕೊಂಡಿದ್ದವು ಎಂದು ಬೆಂಗಳೂರಿನ ಚಿಂತಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಬೆಂಗಳೂರಿನ ಅಭಿನವ ಸಹಯೋಗದಲ್ಲಿ ಪಂಪ ಸಭಾಂಗಣದಲ್ಲಿ ಬುಧವಾರ ಆನು ಒಲಿದಂತೆ ಹಾಡುವೆ ಕನ್ನಡ ಮನಸ್ಸಿನೊಂದಿಗೆ ಒಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದರೆ ಈಗ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ನಿರ್ಲಕ್ಷö್ಯಕ್ಕೊಳಗಾಗಿದ್ದು, ಉದ್ಯಮಗಳಾಗಿ ರೂಪುಗೊಂಡಿರುವುದು ದುರಂತದ ಸಂಗತಿ

ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಆದರೆ ಕಾಲ-ಕಾಲಕ್ಕೆ ನೇಮಕಾತಿಗಳು ನಡೆಯುತ್ತಿಲ್ಲ. ವಿವಿಯ ಪರಂಪರೆ ಮುಂದುವರೆಯಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಆಗ ವಿವಿಯಲ್ಲಿ ಸಂಶೋಧನೆಗಳು ಸರಾಗವಾಗಿ ನಡೆದುಕೊಂಡು ಹೋಗುತ್ತವೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮಗಳನ್ನು ಜನರನ್ನು ಎಚ್ಚರಿಸುವ ಶಕ್ತಿ ಸಾಹಿತ್ಯಕ್ಕಿದೆ. ಆದರೆ, ಎಲ್ಲೋ ಒಂದು ಕಡೆ ಸಾಹಿತ್ಯವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಅಧೀನ ಮನಸ್ಥಿತಿಗೆ ಒಳಪಡುತ್ತಿರುವುದು ಕಂಡು ಬರುತ್ತಿದೆ. ದೇಶ, ಸಮಾಜ, ಪರಿಸರವನ್ನು ಪ್ರೀತಿಸುವ ಮನೋಭಾವವನ್ನು ಮತ್ತು ವಿಮರ್ಶಾತ್ಮಕ ದೃಷ್ಠಿಕೋನವನ್ನು ಕಳೆದುಕೊಂಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾದಂಬರಿಕಾರ ಡಾ.ಬಾಳಾಸಾಹೇಬ್ ಲೋಕಾಪುರ ಮಾತನಾಡಿ, ವಿಜ್ಞಾನ ವಿಶ್ಲೇಷಣೆಯಾದರೆ, ಸಾಹಿತ್ಯ ಸಂಶ್ಲೇಷಣೆ ಅಂದರೆ ಸಾಹಿತ್ಯದ ಕೆಲಸ ಕೂಡಿಸುವಿಕೆಯಾಗಿದೆ. ಸಮಾಜದ ಆರೋಗ್ಯವನ್ನು ಕಾಪಾಡುವ ಶಕ್ತಿ ಸಾಹಿತ್ಯಕ್ಕಿದೆ. ಓದಿನ ಮೂಲಕ ಕುವೆಂಪು, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪರಂತಹ ಹಲವಾರು ಸಾಹಿತಿಗಳು ಮುಖಾಮುಖಿಯಾಗಬೇಕು. ಆದರೆ ಇಂದು ಓದುವಿಕೆ ವಿಧಾನಗಳು ಕಣ್ಮರೆಯಾಗುತ್ತಿವೆ ಎಂದರು.

ಅಭಿನವ ಸಂಸ್ಥೆಯ ರವಿಕುಮಾರ್, ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಪೂಜಾ, ಪ್ರಾದ್ಯಾಪಕ ಡಾ.ವೆಂಕಟಗಿರಿ ದಳವಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net