

ಬಾಗಲಕೋಟೆ: ಜಿಲ್ಲೆಯಲ್ಲಿ ಜು.೧ ರಿಂದ ಆಗಸ್ಟ್ ೨೮ ರವರೆಗೆ ಹಮ್ಮಿಕೊಂಡ ಯೋಗಥಾನ್-೨೨ರ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಒತ್ತಡ ನಿರ್ವಹಣೆಗೆ ಯೋಗ ವಿಷಯದ ಕುರಿತು ಭಾನುವಾರ ನಡೆದ ಸಾಮೂಹಿಕ ಯೋಗಾಭ್ಯಾಸ ಆಕರ್ಷಿಸಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗಥಾನ್-೨೨ರ ಸಾಮೂಹಿಕ ಯೋಗಾಭ್ಯಾಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ವೃದ್ಧಿಗೆ ಯೋಗ ಅವಶ್ಯವಾಗಿದೆ. ಯೋಗ, ಪ್ರಾಣಾಯಾಮ ಹಾಗೂ ಜ್ಞಾನ ಮಾಡುವುದರಿಂದ ನಮ್ಮ ಮನಸ್ಸನ್ನು ತದೇಖಚಿತ್ತಗೊಳಿಸಿ ಆಲ್ಹಾದಕರವನ್ನಾಗಿ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಸೀಲ್ದಾರ್ ವಿನಯಕುಮಾರ ಪಾಟೀಲ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಜಿ.ಗೂಡನವರ, ಜಿಲ್ಲಾ ಆಯುಷ್ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ನೆಹರು ಯುವ ಕೇಂದ್ರದ ಅಧಿಕಾರಿ ಸುಷ್ಮಾ ಗವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
೫೦೦ ಕ್ಕೂ ಹೆಚ್ಚು ಜನರಿಂದ ಯೋಗ :ಕಂದಾಯ, ಜಿಲ್ಲಾ ಪಂಚಾಯಿತಿ, ಪೊಲೀಸ್ ಹಾಗೂ ಹೋಮ್‌ಗಾರ್ಡ್ಸ್ ಇಲಾಖೆ ಅಽಕಾರಿ ಹಾಗೂ ಸಿಬ್ಬಂದಿ, ಸಾರ್ವಜನಿಕರು ಸೇರಿ ೫೦೦ ಕ್ಕೂ ಹೆಚ್ಚು ಜನ ಒತ್ತಡದ ನಿರ್ವಹಣೆಗೆ ಯೋಗ ವಿಷಯದ ಕುರಿತು ಸಾಮೂಹಿಕ ಯೋಗಾಬ್ಯಾಸ ಮಾಡಿ ಗಮನ ಸೆಳೆದರು.