ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

2 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬದುಕಿನಲ್ಲಿ ಆಸಕ್ತಿಯುತ, ಸಮಾಜಮುಖಿ ಕ್ಷೇತ್ರದಲ್ಲಿ ಸಾಧನೆ ಮಾಡಲು ದೈಹಿಕ, ಮಾನಸಿಕವಾಗಿಯೂ ಸಬಲರು, ಸದೃಢರಾಗಿರಬೇಕು. ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕು. ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಹಿರಿಯ ಶಿಕ್ಷಕಿ ಬಿ.ಪಿ ಜೋಶಿ ಹೇಳಿದರು.
ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಾದಿಯಾಗಿ ಎಲ್ಲರೂ ನಿತ್ಯ ಕೆಲ ಸಮಯ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಇದರಿಂದ ಮಾನಸಿಕ ಏಕಾಗೃತೆ ಹೆಚ್ಚಿ ಬದುಕಿನ ಉತ್ಸಾಹ ಇಮ್ಮಡಿಯಾಗುವುದು. ಆಧುನಿಕ ಯುಗದಲ್ಲಿ ಅನೇಕ ಯುವಕರು ಮೊಬೈಲ್ ಗೀಳಿಗೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಅದರ ಬದಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರೋಗ್ಯ ಸುಧಾರಣೆಯಾಗುವುದು ಎಂದರು.
ರಂಗನಾಥ ವಾಲ್ಮೀಕಿ ಮಾತನಾಡಿ, ಧ್ಯಾನಚಂದ್ ಹಾಕಿ ಕ್ರೀಡೆಯಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದ ಮಹಾನ್ ತಾರೆ. ಅವರು ಕ್ರೀಡಾಪಟು ಮಾತ್ರವಲ್ಲದೆ ಅಪ್ಪಟ ದೇಶಪ್ರೇಮಿಯಾಗಿದ್ದರು. ಸೈನಿಕನಾಗಿ ಭಾರತದ ಸೇವೆ ಸಲ್ಲಿಸುತ್ತಾ ಹಾಕಿಯಲ್ಲಿ ಮಿಂಚಿದ ಮಹಾನ್ ತಾರೆ ಇವರಾಗಿದ್ದರು. ಅನೇಕ ಕ್ರೀಡಾಪಟುಗಳ ಬದುಕಿನ ಇತಿಹಾಸ ತಿಳಿದಾಗ ಅವರು ಬಡತನದಲ್ಲಿ ಜನಿಸಿ ಅನೇಕ ಸಮಸ್ಯೆ ಎದುರಿಸಿ ಆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದನ್ನು ಕಾಣಬಹುದು. ಆರೋಗ್ಯವಂತ ವ್ಯಕ್ತಿ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರಲು ಸಾಧ್ಯ. ದೈಹಿಕ ಮಾನಸಿಕ ಅರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಸಹಕಾರಿ ಎಂದರು.
ನಿಗದಿ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಶಾಲೆ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಸಿ.ಸಿ. ಹಿರೇಮಠ, ಎನ್.ಕೆ. ಭಾಗವಾನ್, ಉಷಾ ಶಿವಣ್ಣವರ, ಇತರರು ಇದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಗೊರವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net