ಆರೋಗ್ಯ ವಿವಿ ನಿರ್ಮಾಣಕ್ಕೆ ಮಾರ್ಚ್‌ನಲ್ಲಿ ಶಂಕುಸ್ಥಾಪನೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆ

26-01-rama-republic2
Published on

ರಾಮನಗರ:  ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಭಾಷಣ ಮಾಡಿದ ಅವರು, ಜಿಲ್ಲೆಯಲ್ಲಿ 250 ಹಾಸಿಗೆಗಳನ್ನು ಹೊಂದಿದ್ದ ಜಿಲ್ಲಾಸ್ಪತ್ರೆಯ ಸಾಮರ್ಥ್ಯವನ್ನು 650ಕ್ಕೆ ಏರಿಸಲಾಗಿದೆ. ಇಲ್ಲಿಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ರೈತರ ಸಬಲೀಕರಣಕ್ಕೆ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಜಿಲ್ಲೆಗೆ 179 ಕೋಟಿ ರೂಪಾಯಿ ನೆರವು ರೈತರ ಬ್ಯಾಂಕ್ ಖಾತೆಗಳಿಗೆ ಹರಿದು ಬಂದಿದೆ. ಇದರಿಂದ 1.18 ಲಕ್ಷ ರೈತ ಕುಟುಂಬಗಳಿಗೆ ಲಾಭವಾಗಿದೆ. ಇದರ ಜತೆಗೆ ರಾಜ್ಯ ಸರ್ಕಾರವು 63 ಕೋಟಿ ರೂ. ಕೊಟ್ಟಿದೆ ಎಂದು ವಿವರಿಸಿದರು.

ಜಿಲ್ಲೆಯ ರೈತರಿಗೆ 18 ಕೋಟಿ ರೂಪಾಯಿ ಮೌಲ್ಯದ ಕೃಷಿ ಉಪಕರಣಗಳನ್ನು ಕೊಡಲಾಗಿದೆ. ಹಾಗೆಯೇ, ರೇಷ್ಮೆ ಬೆಳೆಗಾರರಿಗೆ 25 ಕೋಟಿ ರೂಪಾಯಿ ನೇರ ಅನುದಾನ ಒದಗಿಸಲಾಗಿದೆ. ಜತೆಗೆ ಮುಂದಿನ ಸಂಪುಟ ಸಭೆಯಲ್ಲಿ ಚನ್ನಪಟ್ಟಣದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಿಸುವ ಯೋಜನೆಗೆ ಅನುಮೋದನೆ ದೊರಕಿಸಿಕೊಡಲಾಗುವುದು. ಜತೆಗೆ ಬೈರಾಪಟ್ಟಣದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ಸಿಹಿಸುದ್ದಿ ಕೊಟ್ಟರು.

ಜಿಲ್ಲೆಯಲ್ಲಿ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬಾಕಿ ಉಳಿದಿರುವ ಮನೆಗಳಿಗೆ ಈ ವರ್ಷದ ಡಿಸೆಂಬರ್ ಹೊತ್ತಿಗೆ ಹೊಸದಾಗಿ ನಲ್ಲಿ ಸಂಪರ್ಕ ಕೊಟ್ಟು, ನದಿಮೂಲದ ಶುದ್ಧ ನೀರು ಪೂರೈಸಲಾಗುವುದು. ಇದರಿಂದ ಜನರ ಆರೋಗ್ಯ ಸುಧಾರಿಸಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಹಾಲು ಉತ್ಪಾದನೆ ಉತ್ತೇಜಿಸಲು ಸರ್ಕಾರ ಪ್ರತಿ ಲೀಟರ್‌ಗೆ 5 ರೂ.ನಂತೆ ಜಿಲ್ಲೆಯ ಹಾಲು ಉತ್ಪಾದಕರಿಗೆ 122 ಕೋಟಿ ರೂ.ಗಳನ್ನು ಖಾತೆಗೆ ಜಮಾ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 2.11 ಲಕ್ಷ ಕುಟುಂಬಗಳಿದ್ದು, ಈ ಪೈಕಿ 2.02 ಲಕ್ಷ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಿದೆ. ಇದರಲ್ಲಿ 4.52 ಲಕ್ಷ ಕೂಲಿ ಕಾರ್ಮಿಕರಿರುತ್ತಾರೆ. 2021-22 ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ 30 ಲಕ್ಷ ಮಾನವ ದಿನಗಳ ವಾರ್ಷಿಕ ಗುರಿ ಹೊಂದಿದ್ದು, ಈಗಾಗಲೇ 67 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ. 2021-22ನೇ ಸಾಲಿಗೆ 153 ಕೋಟಿ ರೂ.ಗಳ ಆರ್ಥಿಕ ಗುರಿ ಹೊಂದಿದ್ದು, ಈಗಾಗಲೇ 234 ಕೋಟಿ ರೂ.ಗಳಷ್ಟು ವೆಚ್ಚವಾಗಿದೆ. ಜಿಲ್ಲೆ ಆರ್ಥಿಕ ಗುರಿಯಲ್ಲಿ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುತ್ತದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ 252 ಗ್ರಾಮಗಳನ್ನು ಬೂದು ನೀರು ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದ್ದು. ಗಣರಾಜ್ಯೋತ್ಸವದ ದಿನದಂದು ಮತ್ತೆ 126 ಗ್ರಾಮಗಳನ್ನು ಬೂದು ನೀರು ಮುಕ್ತ ಗ್ರಾಮಗಳೆಂದು ಹೆಮ್ಮೆಯಿಂದ ಘೋಷಣೆ ಮಾಡುತ್ತಿದ್ದೇನೆ ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22ನೇ ಸಾಲಿನಲ್ಲಿ ಜಿಲ್ಲೆಯ ರೈತರಿಂದ 3377 ರೂ.ಗಳ ದರದಲ್ಲಿ ಕ್ವಿಂಟಾಲ್ ರಾಗಿ ಮತ್ತು 1940 ರೂ. ದರದಲ್ಲಿ ಕ್ವಿಂಟಾಲ್ ಭತ್ತ ಖರೀದಿಸಲು ದರ ನಿಗದಿಪಡಿಸಲಾಗಿದ್ದು, ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಅನ್ನ ಭಾಗ್ಯ ಯೋಜನೆಯ ಜತೆಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಫಲಾನುಭವಿಗಳು ಸೇರಿ ಒಟ್ಟು 9,38,093 ಲಾನುಭವಿಗಳಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿ ವಿತರಣೆ ಮಾಡಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್, ಎಡಿಸಿ ಟಿ.ಜವರೇಗೌಡ, ಜಿಪಂ ಸಿಇಒ ಇಕ್ರಂ, ಉಪ ಕಾರ್ಯದರ್ಶಿ ರಮೇಶ್, ತಹಸೀಲ್ದಾರ್ ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಮುಂತಾದವರು ಇದ್ದರು.

ರಾಮನಗರ, ಚನ್ನಪಟ್ಟಣ, ಮಾಗಡಿ ಪೊಲೀಸ್ ತಂಡ, ಜಿಲ್ಲಾ ಶಸ್ತ್ರಮೀಸಲು ಪಡೆ, ಗೃಹ ರಕ್ಷಕದಳ ತಂಡ, ರಾಮನಗರ ಜಿಲ್ಲಾ ಮಹಿಳಾ ಪೊಲೀಸ್ ತಂಡ, ಗೃಹ ರಕ್ಷಕದಳ ಮಹಿಳಾ ತಂಡ, ಎನ್‌ಸಿಸಿ, ರಾಮನಗರ ಜಿಲ್ಲಾ ಪೊಲೀಸ್ ವಾದ್ಯ ವೃಂದ ತಂಡಗಳು ಪಥಸಂಚಲನದಲ್ಲಿ ಭಾಗಿ ಆಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net