ಆರೋಗ್ಯ ಭಾರತಿ ಆಸ್ಪತ್ರೆ ಮುಚ್ಚಲು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಆದೇಶ, ಅನೈರ್ಮಲ್ಯ, ಶೌಚಗೃಹ ಇಲ್ಲದಿರುವುದಕ್ಕೆ ಕಿಡಿ

28 dpt 2 dabaspetege d c beqi
Published on

ದಾಬಸ್‌ಪೇಟೆ: ಪಟ್ಟಣದ ಶಿವಗಂಗೆಯಲ್ಲಿರುವ ಆರೋಗ್ಯ ಭಾರತಿ ಆಸ್ಪತ್ರೆಯನ್ನು ತಕ್ಷಣವೇ ಮುಚ್ಚಿಸುವಂತೆ ತಹಸೀಲ್ದಾರ್ ಮಂಜುನಾಥ್ ಅವರಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಆದೇಶಿಸಿದ್ದಾರೆ.

ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಸಮರ್ಪಕವಾದ ಚಿಕಿತ್ಸೆ ಕೊಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಸಮಗ್ರವಾಗಿ ಪರಿಶೀಲಿಸಿ, ಈ ಆದೇಶ ನೀಡಿದ್ದಾರೆ.

ಆಸ್ಪತ್ರೆಯ ಎಲ್ಲೆಡೆ ಅನೈರ್ಮಲ್ಯ ವಾತಾವರಣ ಇತ್ತು. ಆಸ್ಪತ್ರೆಯು ಯಾವುದೇ ನಿಯಮವನ್ನೂ ಪಾಲಿಸಲಾಗುತ್ತಿರಲಿಲ್ಲ. ಈ ಅವ್ಯವಸ್ಥೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಅವರು ‘ಆಸ್ಪತ್ರೆ ನಡೆಸುವುದು ಹೀಗೇ ಏನ್ರೀ’ ಎಂದು ಆಸ್ಪತ್ರೆಯ ಮಾಲೀಕ ಚಂದ್ರಶೇಖರ್ ಅವರನ್ನು ಪ್ರಶ್ನಿಸಿದರು.

ದರಪಟ್ಟಿಯ ವಿವರಗಳಿಲ್ಲ: ಆರೋಗ್ಯ ಭಾರತಿ ಆಸ್ಪತ್ರೆಯನ್ನು ಪ್ರವೇಶಿಸುತ್ತಿದ್ದಂತೆ ಜಿಲ್ಲಾಧಿಕಾರಿ ಅವರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ದರಪಟ್ಟಿಯ ಬೋರ್ಡ್ ಬಗ್ಗೆ ವಿಚಾರಿಸಿದರು. ಆದರೆ, ದರಪಟ್ಟಿಯನ್ನು ಪ್ರಕಟಿಸದಿರುವ ಬಗ್ಗೆ ಸಮಂಜಸ ಉತ್ತರ ಕೊಡಲು ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯರು ವಿಲರಾದರು.

ಆಕ್ಸಿಜನ್ ಸಿಲಿಂಡರ್‌ಗಳು ಹೊರಗೆ: ಕರೊನಾ ಸೋಂಕಿತರಿಗೆ ನೀಡಲು ತರಲಾಗಿದ್ದ ಆಕ್ಸಿಜನ್ ಸಿಲಿಂಡರ್‌ಗಳನ್ನು ಯಾವುದೇ ಮುಂಜಾಗ್ರತೆ ಇಲ್ಲದೆ, ಆಸ್ಪತ್ರೆಯ ಹೊರಭಾಗದಲ್ಲಿ ಇರಿಸಲಾಗಿತ್ತು. ಏನಾದರೂ ಆಮ್ಲಜನಕ ಸೋರಿಕೆಯಾದರೆ, ಯಾರು ಹೊಣೆ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಅವರು, ಸಿಲಿಂಡರ್‌ಗಳನ್ನು ಅಳವಡಿಸುವುದು ಹೀಗೆನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೌಚಗೃಹವೇ ಇಲ್ಲ: ಆಕ್ಸಿಜನ್ ಪಡೆಯುತ್ತಿರುವ ಕರೊನಾ ಸೋಂಕಿತರಿಗೆ ಪ್ರತ್ಯೇಕವಾದ ಶೌಚಗೃಹದ ವ್ಯವಸ್ಥೆ ಇರಲಿಲ್ಲ. ಇದನ್ನು ಕಂಡ ಕೆ. ಶ್ರೀನಿವಾಸ್, ಇವರೆಲ್ಲರೂ ಬೇರೆ ಕೊಠಡಿಗಳಲ್ಲಿರುವ ಶೌಚಗೃಹವನ್ನು ಬಳಸಬೇಕಾಗುತ್ತದೆ. ಅಲ್ಲಿಗೆ ಹೋಗುವಾಗ ಇವರು ತಮ್ಮೊಂದಿಗೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯಬೇಕೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯರನ್ನು ಪ್ರಶ್ನಿಸಿದರು.

3 ಬಾರಿ ನೋಟಿಸ್ ಕೊಟ್ಟರೂ ಉತ್ತರ ಇಲ್ಲ: ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ನಿರಂತರವಾಗಿ ದೂರುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯ ಆಡಳಿತ ಮಂಡಳಿ ಅವರಿಗೆ ಮೂರು ಬಾರಿ ನೋಟಿಸ್ ಕೊಟ್ಟಿದ್ದರು. ಆದರೆ, ಆಡಳಿತ ಮಂಡಳಿಯವರು ನೋಟಿಸ್‌ಗೆ ಯಾವುದೇ ಉತ್ತರ ಕೊಟ್ಟಿರಲಿಲ್ಲ. ಇದು ಕೂಡ ಜಿಲ್ಲಾಧಿಕಾರಿ ಅವರನ್ನು ಕೆರಳಿಸಿತು.

ಪ್ಯಾಕ್ ಮಾಡದೆ ಶವಗಳ ಹಸ್ತಾಂತರ: ಆರೋಗ್ಯ ಭಾರತಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಸಮರ್ಪಕವಾಗಿ ಚಿಕಿತ್ಸೆ ಕೊಡುತ್ತಿಲ್ಲ. ಮೃತರ ಶವಗಳನ್ನು ಪ್ಯಾಕ್ ಮಾಡದೆ, ಹೇಗೆಂದರೆ ಹಾಗೆ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತಿದೆ. ಕರೊನಾ ಸೋಂಕಿನ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸರಿಯಾಗಿ ಬಿಲ್ ಕೊಡುತ್ತಿಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ದೂರಿಕೊಂಡಿದ್ದರು. ಜತೆಗೆ ಇದೆಲ್ಲದಕ್ಕೂ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೊಣೆಯಾಗಿಸಿ, ಕಟುವಾಗಿ ಟೀಕಿಸುತ್ತಿದ್ದರು.

ವಿವಿಧ ಆಸ್ಪತ್ರೆಗಳಿಗೆ ಭೇಟಿ: ಸೋಂಪುರ ಹೋಬಳಿಯ ಗೋವಿಂದಪುರ ಗ್ರಾಮ, ನರಸೀಪುರ ಸರ್ಕಾರಿ ಆಸ್ಪತ್ರೆ, ದಾಬಸ್‌ಪೇಟೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ, ಲಸಿಕೆ, ಮೊಬೈಲ್ ಕ್ಲಿನಿಕ್, ಆಸ್ಪತ್ರೆಯಲ್ಲಿನ ಸ್ವಚ್ಛತೆ ಪರಿಶೀಲಿಸಿದರು.

ನರಸೀಪುರ ಗ್ರಾಪಂ ವ್ಯಾಪ್ತಿಯ ಗೋವಿಂದಪುರ ಗ್ರಾಮದಲ್ಲಿ ಮೊಬೈಲ್ ಕ್ಲಿನಿಕ್ ವ್ಯವಸ್ಥೆಯನ್ನು ವೀಕ್ಷಿಸಿದ ಅವರು, ಕರೊನಾ ಪಿಡುಗಿಗೆ ಹೆದರುವ ಅವಶ್ಯಕತೆ ಇಲ್ಲ. ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಬಳಿ ತೋರಿಸಿ ಔಷಧ ಪಡೆದು, ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಿಗೆ ಸಲಹೆ ನೀಡಿದರು.

ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಡಿಎಚ್‌ಒ ಅವರ ಜತೆ ಚರ್ಚಿಸಿ, ವೈದ್ಯರನ್ನು ನಿಯೋಜಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net