ಆರೋಗ್ಯ ಬದುಕಿಗೆ ಕ್ರೀಡೆಗಳು ಸಹಕಾರಿ-ಬಿ.ಜಿ. ಅಜಯಕುಮಾರ್ ಹೇಳಿಕೆ

spor.jpg
Published on

ದಾವಣಗೆರೆ: ಮನುಷ್ಯ ಆಸ್ಪತ್ರೆಗಳತ್ತ ಮುಖ ಮಾಡದಂತೆ ಆರೋಗ್ಯವಂತನಾಗಿ ಬದುಕಲು ಕ್ರೀಡೆಗಳು ಸಹಕಾರಿ ಎಂದು ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಹೇಳಿದರು.

ನೆಹರು ಯುವಕೇಂದ್ರ, ಯುವ ವ್ಯವಹಾರ ಕ್ರೀಡಾ ಸಚಿವಾಲಯ ಹಾಗೂ ಶ್ರೀ ನವದುರ್ಗಾ ಕ್ರೀಡಾ, ಕಲಾ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನಿತ್ಯವೂ ಕ್ರೀಡೆಗಳಲ್ಲಿ ಪಾಲ್ಗೊಂಡಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ. ದೇಶವನ್ನು ಕಟ್ಟಿ ಬೆಳೆಸಿ, ರಕ್ಷಣೆ ಮಾಡಬೇಕಾಗಿರುವ ಯುವಕರು ಸದೃಢ ಆರೋಗ್ಯ ಹೊಂದಬೇಕಾದರೆ, ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಚಿಕ್ಕಂದಿನಿಂದಲೇ ದೇಹ ದಂಡಿಸಿ, ಕ್ರೀಡೆಗಳನ್ನು ಕಲಿತಿರುವ ನೀವು ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಿ, ಉತ್ತಮ ಸಾಧನೆ ಮಾಡಬೇಕು. ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಹಳೆ ಚಿಂತನೆ, ವ್ಯವಸ್ಥೆ ಕಿತ್ತು ಕಸದ ಬುಟ್ಟಿಗೆ ಹಾಕಿ ಅಪ್‌ಡೇಟ್ ಆಗಬೇಕು ಎಂದು ಸಲಹೆ ನೀಡಿದರು.

ನಿರಂತರ ಅಭ್ಯಾಸ ಮಾಡುವವರಿಗೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕ್ರೀಡಾಪಟುಗಳು ನಿರಂತರ ಶ್ರಮದೊಂದಿಗೆ ಪಾಲಕರ ಕನಸನ್ನು ಪರಿಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.

ಶ್ರೀ ನವದುರ್ಗಾ ಕ್ರೀಡಾ, ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಖಾ ರವಿಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕೆ. ಮಂಜುಳಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯ ಸಂಜೀವ್, ಗಾಯತ್ರಿ ಹಾಲೇಶ್, ಬಾತಿ ಶಂಕರ್, ಅಶೋಕ್ ಗೋಪನಾಳ್, ಎಸ್.ಜಿ. ಸೋಮಶೇಖರ್, ವಿ.ಆರ್. ಸವಿತಾ ಇತರರಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net