

ಚನ್ನರಾಯಪಟ್ಟಣ: ಪಟ್ಟಣದ 23 ವಾರ್ಡ್‌ಗಳಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ (ಎಚ್‌ಎನ್‌ಎಸ್)ಯನ್ನು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡಿ ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಮನವಿ ಮಾಡಿದರು.
ಸಮೀಕ್ಷೆ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲ 23 ವಾರ್ಡ್‌ಗಳ ನಾಗರಿಕರು, ಸಮೀಕ್ಷೆಗಾಗಿ ನಿಮ್ಮ ಮನೆ ಬಾಗಿಲಿಗೆ ಬರುವ ಆರೋಗ್ಯ ಸಿಬ್ಬಂದಿಗೆ ಸಹಕರಿಸಬೇಕು. ಅವರು ಕೇಳುವ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಈ ಸಮೀಕ್ಷೆಯೊಂದಿಗೆ ಆರೋಗ್ಯ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಕ್ಷಯರೋಗ, ಅನಿಮಿಯಾ, ಹೆಪಟೈಟೀಸ್ ಬಿ ಸೇರಿ ವಿಟಮಿನ್ ಕೊರತೆ ಎದುರಿಸುತ್ತಿರುವ ಸಮಸ್ಯೆ ತಿಳಿಯಲು ಮತ್ತು ಸಾರ್ವತ್ರಿಕ ಲಸಿಕೆಯಂತಹ ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ತಮ್ಮ ಮನೆ ಬಳಿ ಬರುವ ಸಿಬ್ಬಂದಿಗೆ ಅಗತ್ಯ ದಾಖಲಾತಿ ನೀಡಲು ತಾವು ಹಿಂದೇಟು ಹಾಕಿದಲ್ಲಿ, ತಾವೇ ಖುದ್ದಾಗಿ ತಮ್ಮ ಸಮೀಪದ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಅಗತ್ಯ ದಾಖಲಾತಿಗಳನ್ನು ನೀಡಿ ನೋಂದಣಿಗೆ ಮುಂದಾಗಬೇಕು ಎಂದರು.
ಇದರೊಂದಿಗೆ ಪ್ರತಿ ತಿಂಗಳು ಮೊದಲು ಮತ್ತು ಮೂರನೇ ಶುಕ್ರವಾರ ಡೆಂೆ ಜ್ವರ ಹತೋಟಿಗಾಗಿ ಲಾರ್ವ ಸಮೀಕ್ಷೆ ಮಾಡಲಾಗುತ್ತಿದ್ದು, ತಿಂಗಳಲ್ಲಿ ಎರಡು ದಿನ ನಡೆಯುವ ಲಾರ್ವ ಸಮೀಕ್ಷೆಗೆ ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದರು.
ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅನಿತಾ, ಪುಷ್ಪಾವತಿ, ಡಾ.ನೂತನ ಮತ್ತಿತರರಿದ್ದರು.