ಆರೋಗ್ಯ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ದೊಡ್ಡದು

4
Published on

ಮೈಸೂರು: ಮೈಸೂರು ಸಂಸ್ಥಾನ ಆಡಳಿತ ಕಾಲದಲ್ಲೇ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು. ಇದರಿಂದ ಈ ಭಾಗದಲ್ಲಿ ವೈದ್ಯಕೀಯ ಕ್ಷೇತ್ರದ ಪ್ರಗತಿಯಾಯಿತು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.


ಅಂತಾರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಆರೋಗ್ಯ, ಯೋಗಕ್ಷೇಮ, ಕ್ರೀಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮೈಸೂರು ಸಂಸ್ಥಾನದ ಕಾಲದಲ್ಲೇ ಆರೋಗ್ಯ ಕ್ಷೇತ್ರ ಸಕ್ರಿಯವಾಗಿತ್ತು. ಅಲೋಪತಿ ವೈದ್ಯಕೀಯ ಪದ್ಧತಿಗೆ ಉತ್ತೇಜನ ನೀಡಲಾಗಿತ್ತು. ಇದರೊಂದಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿಗೂ ಆದ್ಯತೆ ನೀಡಲಾಯಿತು. ಅದಕ್ಕಾಗಿ ಸಂಸ್ಥೆಗಳನ್ನೂ ಸ್ಥಾಪನೆ ಮಾಡಿ ವಿಶೇಷ ಆದ್ಯತೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಗೊಂಡಿತು ಎಂದರು.


ಜನರ ಆರೋಗ್ಯ, ಸಮಾಜದ ಸ್ವಾಸ್ಥ್ಯಕ್ಕಾಗಿ ಮೈಸೂರು ಸಂಸ್ಥಾನ ಸಾಕಷ್ಟು ರಚನಾತ್ಮಕ ಕಾರ್ಯಕ್ರಮ ರೂಪಿಸಿತ್ತು ಎಂದು ಅವರು ಸ್ಮರಿಸಿದರು.
ಮೈಸೂರಿನ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರು ಯೋಗವನ್ನು ಮೈಸೂರು ಜನರಿಗೆ ಪರಿಚಯಿಸಿದರು. ಯೋಗ ಪ್ರವರ್ಧಮಾನಕ್ಕೆ ಬರಲು ಇದು ಕಾರಣವಾಯಿತು ಎಂದರು.


ಸಕಾರಾತ್ಮಕ ಚಿಂತನೆ ಹೆಚ್ಚಲಿ:
ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯವರೆಗೂ ನಕಾರಾತ್ಮಕ ಚಿಂತನೆ ತಾಂಡವವಾಡುತ್ತಿದೆ. ಇದರಿಂದಾಗಿ ಅಶಾಂತಿ ನಿರ್ಮಾಣವಾಗುತ್ತಿದೆ. ಮನಸ್ಸಿಗೆ ಸಕಾರಾತ್ಮಕ ಚಿಂತನೆ ಶಕ್ತಿ ತುಂಬಬೇಕಾಗಿದೆ ಎಂದರು. ಡಾ.ಇ.ವಿ.ಸ್ವಾಮಿನಾಥನ್ ಮಾತನಾಡಿದರು.


ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿಯಾಗಿ ಶಿಲ್ಪಿ ಅಗರ್ವಾಲ್, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಡಾ.ಆರ್.ರಕ್ಷಿತ್ ಶೃಂಗೇರಿ, ಅಪೋಲೋ ಆಸ್ಪತ್ರೆಯ ಡಾ.ಕವಿತಾ ಪ್ರಕಾಶ್, ಚಿತ್ರನಟಿ ಬೇಬಿ ರೇಖಾ ರೋಹಿತ್, ನೆಹರು ಯುವ ಕೇಂದ್ರದ ವಿಭಾಗೀಯ ನಿರ್ದೇಶಕ ಎಂ.ಎನ್.ನಟರಾಜ್ ಇತರರು ಭಾಗವಹಿಸಿದ್ದರು. ಇದಕ್ಕೂ ಮೊದಲು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದ ವರೆಗೆ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net