ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ

Martalli
ಮಾರ್ಟಳ್ಳಿ ಗ್ರಾಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ರೋಡ್ ಶೋ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
Published on

ಹನೂರು: ಮಾರ್ಟಳ್ಳಿ ಹಾಗೂ ಕೂಡಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮದಲ್ಲಿ ಭಾನುವಾರ ರೋಡ್ ಶೋ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಈ ಬಾರಿ ಹೆಚ್ಚಿನ ಮತದ ಅಂತರದಿಂದ ನನ್ನನ್ನು ಗೆಲ್ಲಿಸಿ ಆಶೀರ್ವದಿಸಿ ಸೇವೆ ಮಾಡಲು ಅವಕಾಶ ನೀಡುವುದಕ್ಕೆ ಸದಾ ಋಣಿಯಾಗಿರುತ್ತೇನೆ. ಈ ದಿಸೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಡಲಾಗುವುದು. ಇದರಲ್ಲಿ ಎರಡು ಮಾತಿಲ್ಲ. ಜತೆಗೆ ಈ ಭಾಗದಲ್ಲಿ ಇದುವರೆಗೂ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ವಡಕೆ ಹಳ್ಳದಿಂದ ಮಾರ್ಟಳ್ಳಿ ಮಾರ್ಗವಾಗಿ ರಾಮಾಪುರ ಸೇರುವ 79 ಕಿ.ಮೀ ರಸ್ತೆಯಲ್ಲಿ ದುರಸ್ತಿಯಾಗಿರುವ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಮಾಪುರ -ಗರಿಗೆಕಂಡಿ, ಅಂಬಿಕಾಪುರದಿಂದ ರಾಮಾಪುರದವರೆಗೆ ರಸ್ತೆ ಅಭಿವೃದ್ಧಿಗೂ ಸೂಚಿಸಲಾಗಿದೆ. ಜತೆಗೆ ತಾಲೂಕಿನಲ್ಲಿ 23 ಮೆಗಾ ವ್ಯಾಟ್ ವಿದ್ಯುತ್ ಸಾಕಾಗುತ್ತಿಲ್ಲ. ಈಗಾಗಲೇ ರೈತರು ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದ್ದರಿಂದ ಕ್ಷೇತ್ರದ ಸಮಸ್ಯೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಇದೆ ವೇಳೆ ಮಹಿಳೆಯರು ಶಾಸಕರಿಗೆ ಆರತಿ ಎತ್ತಿ ತಿಲಕವಿಟ್ಟು ಆತ್ಮೀಯವಾಗಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net