

ಸುಂಟಿಕೊಪ್ಪ: ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಹೈರಾಣಾಗಿದ್ದಾರೆ.
ಕಳೆದ 15 ದಿನಗಳಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಜ್ವರ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಂಡಿದೆ. ನಿವಾಸಿಗಳಲ್ಲಿ ಅತಿಯಾಗಿ ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿ ಕಂಡುಬರುತ್ತಿದೆ. ದಿನ ಕಳೆದಂತೆ ರೋಗ ಮತ್ತಷ್ಟು ಅಧಿಕವಾಗಿ ಉಲ್ಬಣಗೊಳ್ಳುತ್ತಿದ್ದು, ಡೆಂೆ, ಟೈಪಾಯಿಡ್, ಮಲೇರಿಯಾ ರೋಗಗಳಿಗೆ ಇಲ್ಲಿನ ನಿವಾಸಿಗಳು ಸೊರಗುವಂತಾಗಿದೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100ಕ್ಕೂ ಅಧಿಕ ಹೊರ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಹೆರಿಗೆಗೆ ದಾಖಲಾಗುವವರೂ ಇದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ಕಾಯಂ ವೈದ್ಯರನ್ನು ನೇಮಕ ಮಾಡಿಲ್ಲ. ಮಡಿಕೇರಿ ವೈದ್ಯಕೀಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಶಿಕ್ಷಣ ಪಡೆದಿರುವ ವೈದ್ಯರನ್ನು ಇಲ್ಲಿಗೆ ನೇಮಿಸಲಾಗಿದೆ. ಅವರು ಎಲ್ಲ ಕಾಯಿಲೆಗಳಿಗೆ ಸೂಕ್ತ ಪರಿಹಾರ ನೀಡಲು ಆಗುತ್ತಿಲ್ಲ. ಮಲೇರಿಯಾ, ಟೈಪಾಯಿಡ್‌ನಿಂದ ಬಳಲಿ ಈ ಆಸ್ಪತ್ರೆಗೆ ಬಂದವರನ್ನು ಪ್ರಥಮ ಚಿಕಿತ್ಸೆ ನೀಡಿ ಬೇರೆ ಕಡೆಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ ಎಂದು ಈ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗದ ಜನರು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೆಲವು ರೋಗಿಗಳನ್ನು ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿದ್ದೂ ಇದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಒಂದೇ ಔಷಧ ನೀಡುತ್ತಾರೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ, ಟೈಪಾಯಿಡ್ ಬಂದ ಈಗಾಗಲೇ ಮಡಿಕೇರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಅಧಿಕ ರೋಗಿಗಳು ದಾಖಲಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಸಾಂಕ್ರಾಮಿಕ ರೋಗ ತಡೆಗೆ ಕಾರ್ಯಪ್ರವೃತ್ತರಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.