

ಬೇಲೂರು: ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಹೆಸರಿನಲ್ಲಿ ಸರ್ಕಾರ ಪೌರ ಕಾರ್ಮಿಕರ ದಿನ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದು ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಹೇಳಿದರು.
ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪುರಭಸೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನು ಗೌರವಿಸುವ ಕೆಲಸವಾಗಬೇಕು. ಜನರ ಆರೋಗ್ಯ ಕಾಪಾಡುವ ಕಾರ್ಮಿಕರು ತಮ್ಮ ಆರೋಗ್ಯದತ್ತ ಗಮನ ಹರಿಸಬೇಕಿದೆ. ಇದರೊಂದಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ. ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕೊಡಲು ಮುಂದಾಗಬೇಕಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಮಾತನಾಡಿ, ಸ್ವಚ್ಛತಾ ಕಾರ್ಯದಲ್ಲಿ ವೈಯಕ್ತಿಕ ಕೆಲಸ ಮರೆತು ನಿಷ್ಠೆಯಿಂದ ತೊಡಗುತ್ತಿರುವುದರಿಂದ ಸ್ವಚ್ಛತೆಯಲ್ಲಿ ಬೇಲೂರು ಪುರಸಭೆ ಉತ್ತಮ ಹೆಸರು ಪಡೆದಿದೆ ಎಂದು ಪ್ರಶಂಸಿಸಿದರು.
ಪುರಸಭೆ ಸದಸ್ಯ ಶಾಂತಕುಮಾರ್ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಿದ್ದಂತೆ. ಇವರು ಸಹ ಪ್ರತಿನಿತ್ಯ ನೈರ್ಮಲ್ಯಕ್ಕಾಗಿ ಹೋರಾಟ ಮಾಡುತ್ತಿರುತ್ತಾರೆ. ಅವರಿಗೆ ಉತ್ತಮ ಮನೆಗಳು, ಮಕ್ಕಳಿಗೆ ಶಿಕ್ಷಣ, ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ಸರ್ಕಾರ ಮುಂದಾಗಬೇಕು ಎಂದರು.
ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಸಭಾ ಕೌಸರ್, ಸದಸ್ಯರಾದ ಗಿರೀಶ್, ಅಶೋಕ್, ಜಮಾಲ್, ಫಯಾಜ್, ಜಗದೀಶ್, ರತ್ನಾ ಸತ್ಯನಾರಾಯಣ್, ಸೌಮ್ಯಾ, ಮೀನಾಕ್ಷಿ, ಆಶಾರಾಣಿ, ಆರೋಗ್ಯ ನಿರೀಕ್ಷಕಿ ಜ್ಯೋತಿ, ಲೋಹಿತ್, ಪುನೀತ್, ಹರೀಶ್, ಕುಮಾರ್, ವ್ಯವಸ್ಥಾಪಕ ಪ್ರಶಾಂತ್ ಇತರರಿದ್ದರು.