ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಿ: ಪೇಜಾವರ ಶ್ರೀ ಸಲಹೆ

7
Published on

ಮೈಸೂರು: ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣಧಾಮದಲ್ಲಿ ಆಯೋಜಿಸಿರುವ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಭಾನುವಾರ ಏರ್ಪಡಿಸಿದ್ದ ಆಯುರ್ವೇದ ಆರೋಗ್ಯ ಉಚಿತ ತಪಾಸಣೆ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಭಾಗ್ಯ ಈಗ ಅತ್ಯಂತ ಪ್ರಮುಖವಾದದ್ದು. ಆದರೆ ಇಂದಿನ ಜೀವನದ ಒತ್ತಡ, ಬದಲಾದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆ ತಲೆದೋರುತ್ತಿದೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನಹರಿಸಬೇಕು. ಕಾಲ ಕಾಲಕ್ಕೆ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜೀವನದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ಯೋಗ, ಧ್ಯಾನವನ್ನು ಅಳವಡಿಸಕೊಳ್ಳಬೇಕು. ವಿದೇಶಿಗರು ಈಗ ಆಯುರ್ವೇದ, ಯೋಗ, ಧ್ಯಾನದ ಕಡೆ ಒಲವು ತೋರುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳಿಗೆ ನಮ್ಮ ಪುರಾತನ ಆಯುರ್ವೇದ ಪದ್ಧತಿಯನ್ನು ಅನುಸರಿಸುವ ಮೂಲಕ ಸಮಸ್ಯೆ ನಿವಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಶ್ರೀರಂಗಪಟ್ಟಣದ ಚಂದ್ರವನದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಮ್ಮ ನಾಡಿನ ಯೋಗ, ಆಯುರ್ವೇದ ಪದ್ಧತಿಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿವೆ. ಭಾರತ ತಪೋವನ ಇದ್ದಂತೆ. ಇಲ್ಲಿ ಅನೇಕ ಯತಿಗಳು, ಸಾಧು ಸಂತರು ಜನಿಸಿ ಅನೇಕ ಯಶಸ್ವಿ ಸಂಶೋಧನೆಗಳನ್ನು ನಡೆಸಿ ಕೊಡುಗೆ ನೀಡಿದ್ದಾರೆ ಎಂದರು.
ಚಿಂತೆಯಿಂದಲೇ ಹಲವು ರೋಗಗಳು ನಮ್ಮನ್ನು ಕಾಡುವುದರಿಂದ ಮನುಷ್ಯ ಮೊದಲು ಚಿಂತೆಯನ್ನು ಬಿಡಬೇಕು. ನಮ್ಮ ಪೂರ್ವಜರು ಕಲಿಸಿಕೊಟ್ಟಿರುವ ಯೋಗ, ಧ್ಯಾನ ಮತ್ತು ಆಯುರ್ವೇದ ಪದ್ಧತಿಯನ್ನು ಬಳಸಿಕೊಂಡು ಎಲ್ಲರೂ ಸಮಾಧಾನ ಚಿತ್ತದಿಂದ ಆರೋಗ್ಯವಂತರಾಗಬೇಕು. ಆಗಸ್ಟ್ 6ರಂದು ಬೇಬಿ ಗ್ರಾಮದಲ್ಲಿಯೂ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್ ಮಾತನಾಡಿದರು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಹಿರಿಯ ವೈದ್ಯರಾದ ಡಾ.ರಾಧಾಕೃಷ್ಣರಾಂ ರಾವ್, ಡಾ.ಗುರುಬಸವರಾಜು, ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಚಾತುರ್ಮಾಸ ಸಮಿತಿ ಅಧ್ಯಕ್ಷ ಎಂ. ಕೃಷ್ಣದಾಸ್ ಪುರಾಣಿಕ್, ಕಾರ್ಯಧ್ಯಕ್ಷ ರವಿಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ತಂತ್ರಿ, ಆರೋಗ್ಯ ಸೇವಾ ಸಮಿತಿಯ ಅಧ್ಯಕ್ಷ ಕೆ.ಎಸ್.ಗುರುರಾಜ್, ಡಾ.ರೂಪಾ ಪ್ರಕಾಶ್, ಡಾ.ಪ್ರಕಾಶ್ ಪ್ರಭು, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಮುಖಂಡ ಅಜಯ್ ಶಾಸ್ತ್ರಿ ಇತರರು ಇದ್ದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಅನ್ನಪೂರ್ಣ ಐ ಆಸ್ಪತ್ರೆ, ಜೆಎಸ್‌ಎಸ್ ಡೆಂಟಲ್ ಕಾಲೇಜು, ನಾರಾಯಣ ಹೃದಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಾವೇರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಇತರ ಸಂಸ್ಥೆಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net