ಆರೋಗ್ಯ ಕರ್ನಾಟಕದಲ್ಲೇ ಅಸ್ತಿಮಜ್ಜೆ ಕಸಿ : ಆಯುಷ್ಮಾನ್ ಯೋಜನೆಯಡಿ ಉಚಿತ ಟ್ರೀಟ್‌ಮೆಂಟ್

Dinesh Gundurao
Published on

ಬೆಂಗಳೂರು : ಕ್ಯಾನ್ಸರ್ ಸೇರಿ ಅಪರೂಪದ ಕಾಯಿಲೆ ಹೊಂದಿರುವವರ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಮತ್ತು ಜೀವಸಾರ್ಥಕತೆ ಯೋಜನೆಗಳ ಅಡಿಯಲ್ಲಿ ಅಸ್ತಿಮಜ್ಜೆ ಕಸಿ (ಬಿಎಂಟಿ) ಅನ್ನು ಸೇರ್ಪಡೆಗೊಳಿಸಿ ಬಿಪಿಎಲ್ ಕುಟುಂಬದ ಸದಸ್ಯರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವುದಾಗಿ ಘೋಷಿಸಿದೆ.

ಮೂಳೆ ಕ್ಯಾನ್ಸರ್, ಥಲಸ್ಸೆಮಿಯಾ, ಅಪ್ಲ್ಯಾಸ್ಟಿಕ್ ರಕ್ತಹೀನತೆ ಮತ್ತು ಇತರ ರಕ್ತ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೂಳೆ ಮಜ್ಜೆ ಕಸಿ ಅಗತ್ಯವಿದ್ದು, ಪ್ರಸ್ತುತ ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 20 ಲಕ್ಷದಿಂದ 40 ಲಕ್ಷ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಮಾರು 10 ಲಕ್ಷದಿಂದ 12 ಲಕ್ಷ ವೆಚ್ಚ ಆಗಲಿದೆ. ಈಗ ಈ ಕಸಿ ಚಿಕಿತ್ಸೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇರ್ಪಡೆ ಗೊಳಿಸಿರುವುದರಿಂದ ಉಚಿತವಾಗಿ ಸೇವೆ ದೊರೆಯಲಿದೆ.

ಅಗತ್ಯ ಇರುವವರು ಜೀವಸಾರ್ಥಕತೆಯಲ್ಲಿ ಹೆಸರು ನೋಂದಾಯಿಸಿಕೊಂಡಲ್ಲಿ ಆಯುಷ್ಮಾನ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಚಿಕಿತ್ಸೆ ಸಿಗಲಿದೆ. ಇದಕ್ಕಾಗಿ ರಾಜ್ಯದ 24ಕ್ಕೂ ಅಧಿಕ ಆಸ್ಪತ್ರೆಗಳು ಯೋಜನೆಯಡಿ ಚಿಕಿತ್ಸೆ ನೀಡಲು ನೋಂದಾಯಿತಗೊಂಡಿವೆ.

ಯೋಜನೆಯಡಿ ಅಸ್ಥಿಮಜ್ಜೆ ಕಸಿ ಸೇರ್ಪಡೆ ಮಾಡುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ 2024ರ ಅ.10ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಮನವಿ ಮಾಡಿದ್ದರು. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗಾಂಗ ಕಸಿ ಯೋಜನೆ ವಿಸ್ತರಣೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಸ್ಥಿಮಜ್ಜೆ ಕಸಿ ಸೇರ್ಪಡೆಗೊಳಿಸಲಾಗಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಸ್ಥಿಮಜ್ಜೆ ಕಸಿ ಜತೆಗೆ ಹೃದಯ, ಶ್ವಾಸಕೋಶ, ಅಂಗಾಂಶ ಕಸಿಗಳನ್ನೂ ಸೇರ್ಪಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವು ದುಬಾರಿ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಬಡ ರೋಗಿಗಳಿಗೆ ಆಶಾಕಿರಣವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net