

ಮೂಡಿಗೆರೆ: ಮಂಗನಕಾಯಿಲೆ, ಡೆಂೆ, ಹೃದಯ ಸಂಬಂಧಿ, ಕಿಡ್ನಿ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳು ಹಾಗೂ ಮಧುಮೇಹ, ಗ್ಯಾಸ್ಟ್ರಿಕ್, ರಕ್ತದೊತ್ತಡದಂತಹ ಸಾಮಾನ್ಯ ಸಮಸ್ಯೆಗಳೂ ಬಡವರನ್ನು ಹೈರಾಣಾಗಿಸುತ್ತವೆ. ಅಂಥವರಿಗೆ ವರದಾನವಾಗಲೆಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಮಂಗಳೂರಿನ ಕಣಚೂರು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳಿದರು.
ರೋಟರಿಯಿಂದ ಗೋಣಿಬೀಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳೂರಿನ ಕಣಚೂರು ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮಲೆನಾಡು ಭಾಗದಲ್ಲಿ ಗಂಭೀರ ಕಾಯಿಲೆಗಳು ಕಾಣಿಸಿಕೊಂಡಲ್ಲಿ ರೋಗಿಗಳನ್ನು ಮಂಗಳೂರು, ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತದೆ. ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಎಲ್ಲರಿಗೂ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಲಾಗುತ್ತದೆ. ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ ಅಂಥವರನ್ನು ಮಂಗಳೂರಿನಲ್ಲಿರುವ ಕಣಚೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವುದು. ಇದರಿಂದ ಗ್ರಾಮೀಣ ಭಾಗದ ಬಡವರು ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೂಡಿಗೆರೆ ಮತ್ತು ಗೋಣಿಬೀಡು ಭಾಗದಿಂದ ಬಿ.ಸಿ.ರೋಡ್, ಮೇಲ್ಕಾರ್, ಕೋಣಾಜೆ ಮೂಲಕ ಮಂಗಳೂರಿಗೆ ಪ್ರತಿದಿನ ಎರಡು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆ ಮಾಡಿದರೆ ರೋಗಿಗಳು ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗೋಣಿಬೀಡು ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪ್ರಸನ್ನ ಮಾತನಾಡಿ, ಆರೋಗ್ಯ, ನೇತ್ರ, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರವನ್ನು ರೋಟರಿಯಿಂದ ಗೋಣಿಬೀಡಿನಲ್ಲಿ ಆಗಾಗ ಆಯೋಜಿಸುತ್ತಿದ್ದೇವೆ. ಈ ಭಾಗದಿಂದ ಹೆಚ್ಚಾಗಿ ಮಂಗಳೂರು, ಹಾಸನ, ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ರೂಢಿಯಾಗಿದೆ. ಅಲ್ಲಿನ ತಜ್ಞ ವೈದ್ಯರು ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ, ಆರೋಗ್ಯ ತಪಾಸಣಾ ಶಿಬಿರ ನಡೆಸಿದಾಗ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಕಣಚೂರು ಆಸ್ಪತ್ರೆ ವೈದ್ಯರಾದ ಡಾ. ಶ್ರೀಕಾಂತ್ ಹೆಗಡೆ, ಡಾ. ಅಶೋಕ್, ಗೋಣಿಬೀಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿದರ್ಶನ್, ಕಣಚೂರು ಆಸ್ಪತ್ರೆ ವ್ಯವಸ್ಥಾಪಕ ಅಸ್ಕರ್ ಅಲಿ, ರತನ್ ಮಣ್ಣಿಕೆರೆ, ಕೆ.ಟಿ.ಜಗದೀಶ್, ಎಂ.ಸಿ.ನಾಗೇಶ್, ಬಿ.ಎಸ್.ಓಂಕಾರ್, ವರದೇಗೌಡ, ಪ್ರಕಾಶ್, ಸವಿನ್, ಗ್ರಾಪಂ ಸದಸ್ಯ ಆನಂದ ಇತರರಿದ್ದರು.