ಆರೋಗ್ಯ ಇಲಾಖೆ ಹುದ್ದೆ ಶೀಘ್ರ ಭರ್ತಿ

dinesh gundurao meeting
ಬೀದರ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿಮನಸ್ ಪೋಸ್ಟರ್ ಬಿಡುಗಡೆ ಮಾಡಿದರು. ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ಶಾಸಕರಾದ ಶರಣು ಸಲಗರ, ಡಾ.ಸಿದ್ದು ಪಾಟೀಲ್, ಡಿಸಿ ಗೋವಿಂದರಡ್ಡಿ ಇದ್ದರು.
Published on

ಬೀದರ್: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಭಾಗದ ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು ೪೧೦ ಹುದ್ದೆಗಳು ಖಾಲಿ ಇವೆ ಎಂದು ಡಿಎಚ್‌ಒ ಸಭೆ ಗಮನಕ್ಕೆ ತಂದಾಗ, ಹಂತ ಹಂತವಾಗಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ೫೦೦ ಫಾರ್ಮಾಸಿಸ್ಟ್ ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಯುತ್ತಿದೆ. ಆದಷ್ಟು ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರ್ಭಿಣಿಯರು ರಕ್ತ ಹೀನತೆಯಿಂದ ಹೆಚ್ಚಾಗಿ ಬಳಲುತ್ತಿರುವ ಶಂಕೆ ಇದೆ. ಎಚ್ಚರ ವಹಿಸಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ ಇಂಥ ಲಕ್ಷಣ ಕಂಡುಬರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಡಿಮೆ ತೂಕ ಹೊಂದಿದ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ಖಾನ್, ಶಾಸಕರಾದ ಶರಣು ಸಲಗರ, ಡಾ.ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಆರೋಗ್ಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ನವೀನ್, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ.ಎಂ, ಡಿಎಚ್‌ಒ ಡಾ.ಜ್ಞಾನೇಶ್ವರ ನಿರಗುಡೆ ಇತರರಿದ್ದರು. ಇದಕ್ಕೂ ಮುನ್ನ ಸಚಿವ ಗುಂಡೂರಾವ್ ಅವರು ಬ್ರಿಮ್ಸ್ ಮತ್ತು ೧೦೦ ಹಾಸಿಗೆಗಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜವಾಬ್ದಾರಿ ನಿಭಾಯಿಸದಿದ್ದರೆ ಬದಲಾವಣೆ

ಸ್ಥಳೀಯರ ಕೋರಿಕೆ ಮೇರೆಗೆ ಡಿಎಚ್‌ಒ ಹಾಗೂ ಟಿಎಚ್‌ಒಗಳನ್ನು ನೇಮಕ ಮಾಡಲಾಗಿದೆ. ಸರಿಯಾಗಿ ಕೆಲಸ ನಿಭಾಯಿಸದಿದ್ದರೆ ಬದಲಾವಣೆ ಅನಿವಾರ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದರು. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಎಲ್ಲ ಕಾರ್ಯಚಟುವಟಿಕೆಗಳ ಮೇಲೆ ಸಂಪೂರ್ಣ ಜವಾಬ್ದಾರಿ ಡಿಎಚ್‌ಒ ಅವರದ್ದು. ತಮಗೆ ವಹಿಸಿದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಬೇಕು. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳನ್ನು ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಿ ಸಾಮರ್ಥ್ಯ ಇದ್ದವರಿಗೆ ನೇಮಕ ಮಾಡಲಾಗುವುದು ಎಂದು ಹೇಳಿದರು.

ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾತ್ರಿ ಹೊತ್ತು ಇರುವುದಿಲ್ಲ ಎಂಬ ದೂರು ಸಾರ್ವಜನಿಕರಿಂದ ಬರುತ್ತಿವೆ. ಮುಂದೆ ಹೀಗಾಗದಂತೆ ಕ್ರಮ ವಹಿಸಬೇಕು.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net