ಆರೋಗ್ಯ, ಆದಾಯಕ್ಕೆ ಹೈನುಗಾರಿಕೆ ಪೂರಕ

16BK1
Published on

ಬಸವಕಲ್ಯಾಣ: ಆರೋಗ್ಯ ಮತ್ತು ಆದಾಯಕ್ಕೆ ಹೈನುಗಾರಿಕೆ ಪೂರಕವಾಗಿದೆ. ಕೃಷಿ ತೋಟಗಾರಿಕೆ ಜತೆಗೆ ರೈತರು ಕಡ್ಡಾಯವಾಗಿ ಹೈನುಗಾರಿಕೆ ಮಾಡಬೇಕು ಎಂದು ಕೆಎಂಎಫ್ ಮಾಜಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಬುಕ್ಕಾ ಸಲಹೆ ನೀಡಿದರು.

ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಹೈನುಗಾರಿಕೆ ಲಾಭದಾಯಕ ಉದ್ಯಮ ಕುರಿತು ಅನುಭಾವ ನೀಡಿ, ಕ್ಷೀರ ಕ್ರಾಂತಿಯಲ್ಲಿ ಮುಂದಿದ್ದರು ರೈತರಿಗೆ ತೃಪ್ತಿದಾಯಕ ದರ ಕೊಡಲು ಆಗುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ. ತೃಪ್ತಿದಾಯಕ ಬೆಲೆಗೆ ಒಗ್ಗಟ್ಟಿನ ಹೋರಾಟ ಅವಶ್ಯ ಎಂದರು.

ಶುದ್ಧ ಹಾಲಿಗೆ ಹೆಚ್ಚಿನ ಬೇಡಿಕೆ ಸಹಜ. ಶಾಸ್ತಿಯ ಹೈನುಗಾರಿಕೆ ಪದ್ಧತಿಯಿಂದ ನಿರೀಕ್ಷಿತ ಲಾಭ ಕಷ್ಟ. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಲಾಭವಿದೆ. ಒಳ್ಳೆ ತಳಿಯ ಆಕಳು, ಎಮ್ಮೆ ಸಾಕಬೇಕು. ಅವುಗಳಿಗೆ ಸಮತೋಲಿತ ಪೌಷ್ಠಿಕ ಆಹಾರ ಮತ್ತು ರೋಗ ನಿರ್ವಹಣೆ ಅವಶ್ಯ ಎಂದು ಹೇಳಿದರು.

ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ.ಸೋಮಶೇಖರ ರೂಳಿ ಮಾತನಾಡಿ, ನಮ್ಮ ಸುತ್ತಲಿನ ಪರಿಸರಕ್ಕೆ ನಾಶವಾಗದಂತೆ ಪರಿಸರ ಸ್ನೇಹಿ ಜೀವನ ನಡೆಸಬೇಕು. ಮಣ್ಣು, ನೀರು, ಗಾಳಿ ರೈತರ ಪಾಲಿನ ಮುಖ್ಯ ಸಂಪನ್ಮೂಲಗಳು. ಇವು ಬಳಸಿ ಅನ್ನ ಉತ್ಪಾದಿಸುತ್ತೇವೆ ಎಂದರು.
ನಿವೃತ್ತ ಡೀನ್ ಡಾ.ಸುರೇಶ ಪಾಟೀಲ್ ಮಾತನಾಡಿ, ತಾವು ಬೆಳೆದ ಬೆಳೆಗೆ ಒಳ್ಳೆಯ ದರ ಸಿಗಲು ಸಾಂಘಿಕವಾಗಿ ಗುಂಪು ಕಟ್ಟಿಕೊಂಡು ಉತ್ತಮ ಬೆಲೆಗೆ ಮಾರಾಟ ಮಾಡಬೇಕು. ಕಾಲಕಾಲಕ್ಕೆ ಅವಶ್ಯ ಮಾಹಿತಿ ಪಡೆದು ರೈತರು ಉತ್ತಮ ಮಾರುಕಟ್ಟೆ ಬೆಲೆ ಪಡೆದು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ, ತೋಟಗಾರಿಕಾ ಅಧಿಕಾರಿ ವೈಜಯಂತಾ ಕದಮ, ಶರಣಪ್ಪ ಚಿಮಕೋಡೆ, ಕೃಷಿ ಅಧಿಕಾರಿ ಪ್ರಶಾಂತ ವಾಲಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಉಪಾಧ್ಯಕ್ಷ ಚಂದ್ರಶೇಖರ ಮಾತನಾಡಿದರು.

ಬಾಬುರಾವ ಜೋಳದಾಪಕೆ, ಪ್ರಕಾಶ ಬಾವಗೆ, ಜಗನ್ನಾಥ ಚಿಲಾಬಟ್ಟೆ, ಪ್ರವೀಣ ಕುಲಕರ್ಣಿ, ಬಸವರಾಜ ನೇತೆ, ಬಸವರಾಜ ಬೇಲೂರೆ, ಗಣಪತಿ ಕಾಸ್ತೆ, ಜಯಪ್ರಕಾಶ ಸದಾನಂದೆ, ವಿದ್ಯಾವತಿ ಶೇರಿಕಾರ್, ಭಾಗ್ಯಶ್ರೀ ದೇಶಮುಖ ಇತರರಿದ್ದರು. ಕಲ್ಯಾಣಮ್ಮ ವಚನ ಪ್ರಾರ್ಥನೆ ನಡೆಸಿಕೊಟ್ಟರೆ ನಿರಹಂಕಾರ ತುಪ್ಪದ ಸ್ವಾಗತಿಸಿದರು. ಕವಿತಾ ರಾಜೋಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net