

ಸಾಗರ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿದ ದಲಿತ ಸಂಘರ್ಷ ಸಮಿತಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನಿಷಾ ತನ್ನ ತಾಯಿ ಜತೆ ಹುಲ್ಲು ಕತ್ತರಿಸಲು ಜಮೀನಿಗೆ ಹೋಗುತ್ತಿದ್ದಾಗ ಸಂದೀಪ್, ರಾಮು, ಲವಕುಶ, ರವಿ ಎಂಬುವರು ದಾಳಿ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿ, ಭೀಕರವಾಗಿ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಪಾಲಕರಿಗೆ ನೀಡದೆ ರಾತ್ರೋರಾತ್ರಿ ಶವಸಂಸ್ಕಾರ ಮಾಡಿರುವುದು ಹೀನಕೃತ್ಯ. ಈತನಕ ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡದಿರುವುದು ಉತ್ತರ ಪ್ರದೇಶದಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದಕ್ಕೆ ಸಾಕ್ಷಿ. ಇದನ್ನೆಲ್ಲ ಗಮನಿಸಿದರೆ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಮನಿಷಾ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಸಿಎಂ ಅದಿತ್ಯನಾಥ್ ನೇರಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಂತ್ರಸ್ತೆ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ನಾಗರಾಜ್, ಪ್ರಮುಖರಾದ ಶಿವಪ್ಪ ಕೌತಿ, ಚಂದ್ರಣ್ಣ, ನಾರಾಯಣ ಅರಮನೆಕೇರಿ, ಇಬ್ರಾಹಿಂ, ಕಬಸೆ ಅಶೋಕ ಮೂರ್ತಿ, ವಸಂತ ಕುಗ್ವೆ ಇತರರಿದ್ದರು.