ಆರೋಪಿಗಳನ್ನು ಬಂಧಿಸಲು ಪಟ್ಟು

13bhr 1 web
Published on

ಬಾಳೆಹೊನ್ನೂರು: ಹುಣಸೇಹಳ್ಳಿ ಪುರ ಗ್ರಾಮದ ಕಾಫಿ ತೋಟದಲ್ಲಿ ಕಾರ್ವಿುಕರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ದಲಿತಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ಪಟ್ಟಣದ ನಾಡಕಚೇರಿ ಎದುರಿನಿಂದ ಹೊರಟ ಡಿಎಸ್​ಎಸ್, ಭೀಮ್ ಆರ್ವಿು, ಸಿಪಿಐ, ಕರ್ನಾಟಕ ಜನಶಕ್ತಿ, ಆದಿವಾಸಿ ವೇದಿಕೆ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಕೊಪ್ಪ ರಸ್ತೆಯ ಪೆಟ್ರೋಲ್​ಬಂಕ್, ಮುಖ್ಯರಸ್ತೆಯಲ್ಲಿ ಸಾಗಿ ಚಿಕ್ಕಮಗಳೂರು ರಸ್ತೆಯ ರೋಟರಿ ವೃತ್ತ ತಲುಪಿದರು. ಅಲ್ಲಿಂದ ಜೇಸಿ ವೃತ್ತದ ಬಳಿ ಜಮಾಯಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು.

ಪ್ರತಿಭಟನೆ ಆರಂಭಿಸಲು ಮುಂದಾಗುತ್ತಿದ್ದಂತೆ ಕೊಪ್ಪ ಎಎಸ್ಪಿ ಗುಂಜನ್ ಆರ್ಯ, ಎನ್.ಆರ್.ಪುರ ಪಿಎಸ್​ಐ ಪ್ರತಿಭಟನಾ ನಿರತರ ಬಳಿ ತೆರಳಿ ಪ್ರತಿಭಟನೆ ನಡೆಸಿ ಮನವಿ ನೀಡುವಂತೆ ಕೋರಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಸಮಸ್ಯೆ ಆಲಿಸದ ಹೊರತು ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು.

ಎಸ್ಪಿ ಅವರು ಡಿಸಿ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಸುತ್ತಿದ್ದಾರೆ. ಆದರೆ ಅವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಇಲ್ಲಿಗೆ ಬಂದು ಸಂತ್ರಸ್ತರ ಸಮಸ್ಯೆ ಆಲಿಸಬೇಕು. ಪುರ ಗ್ರಾಮದಲ್ಲಿ ಗರ್ಭಿಣಿ ಸೇರಿದಂತೆ ದಲಿತ ಕಾರ್ವಿುಕರ ಮೇಲೆ ದೌರ್ಜನ್ಯ ನಡೆಸಲಾಗಿದೆ. ತೋಟದ ಮಾಲೀಕರು, ಅಧಿಕಾರಿಗಳು ಪ್ರಭಾವ ಬಳಸಿ ಆಶಾ ಕಾರ್ಯಕರ್ತೆ ಬಳಿ ಒತ್ತಾಯಪೂರ್ವಕವಾಗಿ ಹಲ್ಲೆಗೊಳಗಾದ ಅರ್ಪಿತಾ ಅವರಿಗೆ ಈ ಹಿಂದೆಯೇ ಗರ್ಭಪಾತವಾಗಿದೆ ಎಂದು ದಾಖಲೆ ಬರೆಸಿದ್ದಾರೆ. ನಾವು ಪೊಲೀಸರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇವೆ. ಪೊಲೀಸರಿಗೆ ನೈತಿಕತೆಯಿದ್ದರೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ಜನಶಕ್ತಿ ಸಮಿತಿ ಸದಸ್ಯ ರಾಮು ಕೌಳಿ ಆಗ್ರಹಿಸಿದರು.

ಪ್ರತಿಭಟನಾನಿರತರು ಸಂಜೆ ನಾಲ್ಕು ಗಂಟೆವರೆಗೆ ಪ್ರತಿಭಟನೆ ನಡೆಸಿ, ಎಸ್ಪಿ ಸ್ಥಳಕ್ಕೆ ಭೇಟಿ ನೀಡುವಂತೆ ಪಟ್ಟುಹಿಡಿದರು. ಪೊಲೀಸರು ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ಕೊಪ್ಪ ಎಎಸ್ಪಿ ಗುಂಜನ್ ಆರ್ಯ ಅವರಿಗೆ ಮನವಿ ಸಲ್ಲಿಸಿದರು. ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net