ಆರೋಗ್ಯ ಸೇವೆಗಾಗಿ ರೋಗಿಗಳ ಪರದಾಟ

24 RON 2
Published on

ರೋಣ: ಸಮಾನ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಗುರುವಾರ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಪಂಡಿತ ಭೀಮಸೇನ ಜೋಶಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯಲ್ಲಿ ಭಾರಿ ವ್ಯತ್ಯಯ ಕಂಡು ಬಂತು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕ ಗುರುವಾರ ಆರಂಭಿಸಿದ ರಾಜ್ಯ ವ್ಯಾಪಿ ನೌಕರರ ಮುಷ್ಕರಕ್ಕೆ ತಾಲೂಕಿನಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ತಜ್ಞರು, ಡಿ ಗ್ರೂಪ್, ಡೇಟಾ ಎಂಟ್ರಿ ಆಪರೇಟರ್, ವಾಹನ ಚಾಲಕರು ಸೇರಿ 200ಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿ ತಮ್ಮ ಕೆಲಸ ಸ್ಥಗಿತಗೊಳಿಸಿದ್ದರು. ಅದರ ಬಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ತಟ್ಟಿತು. ರೋಗಿಗಳ ಗೋಳು ಕೇಳುವವರೇ ಇಲ್ಲವಾಗಿತ್ತು.

ವ್ಹೀಲ್​ಚೇರ್ ನೂಕೋರಿಲ್ಲ: ರೋಗದ ತೀವ್ರತೆಯಿಂದ ನರಳಾಡಿಕೊಂಡು ಆಸ್ಪತ್ರೆಯ ಮೆಟ್ಟಿಲೇರುವ ಶಕ್ತಿಯೂ ಇಲ್ಲದವರನ್ನು ವ್ಹೀಲ್​ಚೇರ್​ನಲ್ಲಿ ಕರೆದುಕೊಂಡು ಹೋಗಲೂ ನೌಕರರು ಇರಲಿಲ್ಲ. ಹೀಗಾಗಿ ರೋಗಿಗಳನ್ನು ಅವರ ಸಂಬಂಧಿಕರೇ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ತುಂಬಾ ಅಲೆದಾಡುವ ದೃಶ್ಯ ಮನಕಲುಕುವಂತಿತ್ತು.

ಪ್ರಯೋಗಾಲಯಕ್ಕೆ ಬೀಗ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದ ಎಲ್ಲ ನಾಲ್ಕು ಟೆಕ್ನಿಶಿಯನ್​ಗಳು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರರಾಗಿದ್ದಾರೆ. ಮುಷ್ಕರ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಬೀಗ ಜಡಿದ ಪರಿಣಾಮ ಪ್ರಯೋಗಾಲಯದ ಮುಂದೆ ರೋಗಿಗಳು ಸಾಲುಗಟ್ಟಿ ಕಾಯುತ್ತ ಕುಳಿತಿರುವ ದೃಶ್ಯ ಕಂಡು ಬಂತು.

ಏಪ್ಪಾ ಬಹಳ ಜ್ವರಾ ಬಂದಾವ್. ಮುಂಜಾನೆ 9ಕ್ಕೆ ಆಸ್ಪತ್ರೆಗೆ ಬಂದೀನಿ. ಡಾಕ್ಟರ್ ರಕ್ತ ತಪಾಸ್ ಮಾಡಿಕೊಂಡು ಬಾ ಎಂದು ಕಳಿಸಿದ್ದಾರೆ. ಇಲ್ಲಿ ನೋಡಿದರೆ ಯಾರೂ ಇಲ್ಲ. ಏನು ಮಾಡಬೇಕು. | ಹನುಮಪ್ಪ ಜಗ್ಗಲ ರೋಗಿ

ಸರ್ಕಾರದ ಭರವಸೆ ಮೇಲೆ ಸಾಕಷ್ಟು ಬಾರಿ ನಮ್ಮ ಮುಷ್ಕರವನ್ನು ಹಿಂದೆ ಪಡೆದಿದ್ದೇವೆ. ಆದರೆ, ಬೇಡಿಕೆ ಈಡೇರಿಸುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. | ಡಾ. ರಘು ಹೊಸೂರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ನೌಕರರ ಸಂಘದ ತಾಲೂಕಾಧ್ಯಕ್ಷ

ಕೆಲಸದಿಂದ ಹೊರಗುಳಿದ ನೌಕರರು

ಲಕ್ಷ್ಮೇಶ್ವರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಮುಷ್ಕರ ಬೆಂಬಲಿಸಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಗುತ್ತಿಗೆ ಮತ್ತು ಹೊರಗುತ್ತಿಗೆ 24 ನೌಕರರು ಗುರುವಾರ ಕೆಲಸದಿಂದ ಹೊರಗುಳಿದಿದ್ದರು. ‘ವೈದ್ಯರು, ನರ್ಸ್​ಗಳು ಸೇರಿ 24 ನೌಕರರು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವೆ ಕಾಯಮಾತಿ ಸೇರಿ ನಮ್ಮ 14 ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಡಾ. ಗುರುರಾಜ ಕುಡಗಿ ಪತ್ರಿಕೆಗೆ ತಿಳಿಸಿದರು.

ನಿತ್ಯ ನೂರಾರು ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ನೀಡುವುದು ಕಷ್ಟವಾಗುತ್ತದೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರವಾಗಿ ಜನರಿಗೆ ಸಕಾಲಕ್ಕೆ ಸೇವೆ ಲಭಿಸುವಂತಾಗಬೇಕು. | ಡಾ. ಗಿರೀಶ ಮರಡ್ಡಿ ಆಸ್ಪತ್ರೆಯ ಆಡಳಿತಾಧಿಕಾರಿ

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

ರೋಣ: ನೆರೆ ಹಾವಳಿ, ಲಾಕ್​ಡೌನ್​ನಿಂದ ವ್ಯಾಪಾರ-ವಹಿವಾಟು ಸ್ಥಗಿತವಾಗಿ ಆಗಿರುವ ತೋಟಗಾರಿಕೆ ಬೆಳೆಗಳ ಹಾನಿಗೆ ಪರಿಹಾರ ನೀಡುವಂತೆ ರೈತ ಸೇನಾ ಕರ್ನಾಟಕದಿಂದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ರೈತ ಸೇನಾ ತಾಲೂಕಾಧ್ಯಕ್ಷ ಮುತ್ತಣ್ಣ ಕುರಿ ಮಾತನಾಡಿ, ನೆರೆ ಹಾವಳಿ ಯಿಂದ ಸಂಕಷ್ಟಕ್ಕಿಡಾದ ಬೆನ್ನಲ್ಲೇ ಲಾಕ್​ಡೌನ್​ನಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ನಡೆಯದೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಬೆಳೆ ಹಾನಿಯಾದ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದಾರೆ. ಲಾಕ್​ಡೌನ್ ಮುಗಿದು ಹಲವು ತಿಂಗಳಾದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳಿದ್ದರೆ ತಾಲೂಕಾಡಳಿತದಿಂದ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಆನಂದ ಕೊಟಗಿ, ಶರಣಪ್ಪ ಧರ್ವಯತ, ಚಂದ್ರು ಹೊನ್ನವಾಡ, ಹನುಮಪ್ಪ ಹಾಲವರ, ಶಿವಪ್ಪ ಗೋಡಿ, ಶರಣಪ್ಪ ಹಕ್ಕಿ, ಮಲ್ಲಪ್ಪ ಲಕ್ಕನಗೌಡ್ರ, ವೀರಪ್ಪ ಹತ್ತಿಕಟಗಿ, ಸಂಗನಗೌಡ ಮಾಲಿಪಾಟೀಲ, ಕಳಕಪ್ಪ ಜೋಗಿ, ಇತರರಿದ್ದರು.

ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರು

ನರಗುಂದ: ಮುಷ್ಕರ ಬೆಂಬಲಿಸಿ ಇಲ್ಲಿನ ತಾಲೂಕಾಸ್ಪತ್ರೆ, ಚಿಕ್ಕ ನರಗುಂದ, ಜಗಾಪುರ, ಶಿರೋಳ ಪ್ರಾಥಮಿಕ ಆಸ್ಪತ್ರೆಗಳ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಗುರುವಾರ ಕರ್ತವ್ಯಕ್ಕೆ ಗೈರಾಗಿದ್ದರು.

ಆಯುಷ್ ವೈದ್ಯಾಧಿಕಾರಿ ಡಾ. ಸಂತೋಷ ಹಣಜಿ ಮಾತನಾಡಿ, ರಾಜ್ಯದ ಎಲ್ಲ ಆಯುಷ್ ವೈದ್ಯಾಧಿಕಾರಿಗಳಿಗೆ ನಿಯಮಾನುಸಾರ ಪ್ರತಿ ತಿಂಗಳು 56 ಸಾವಿರ ರೂ. ವೇತನ ನೀಡಬೇಕು. ಆದರೆ, 21 ಸಾವಿರ ರೂ. ನೀಡುತ್ತಿದ್ದಾರೆ. ಸ್ಟಾಫ್ ನರ್ಸ್​ಗಳಿಗೆ 45 ಸಾವಿರ ರೂ. ಬದಲಿಗೆ 15 ಸಾವಿರ ರೂ. ಪಾವತಿಸಲಾಗುತ್ತಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವೆಯನ್ನು ಸರ್ಕಾರ ಕಾಯಂಗೊಳಿಸಿಲ್ಲ. ಕರೊನಾ ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಗುತ್ತಿಗೆ ನೌಕರರು ಸೋಂಕಿಗೆ ಒಳಗಾಗಿದ್ದಾರೆ. ಕೆಲವು ನೌಕರರು ಸಾವನ್ನಪ್ಪಿದ್ದು, ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಆರೋಗ್ಯ ಇಲಾಖೆಯ ಕಾಯಂ ನೌಕರರಿಗೆ ನೀಡುತ್ತಿರುವ ಆರೋಗ್ಯ ಸೌಲಭ್ಯ, ಟಿಎ, ಡಿಎ ಸೇರಿ ಸರ್ಕಾರದ ಎಲ್ಲ ಸೇವೆಗಳಿಗೆ ಆಗ್ರಹಿಸಿ ಮೇ ತಿಂಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಅವರು 3 ತಿಂಗಳಲ್ಲಿ ವಿಶೇಷ ಸಮಿತಿ ರಚಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ಹುಸಿಯಾಗಿದ್ದರಿಂದ ಮುಷ್ಕರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಎಲ್ಲ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಡಿ ವರ್ಗದ ನೌಕರರಿಂದ ಹಿಡಿದು ಎಲ್ಲ ವಿವಿಧ ಹುದ್ದೆಗಳ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಮುಷ್ಕರದಿಂದಾಗಿ ತಾಲೂಕಿನ ಎಲ್ಲ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದವು. ಆಸ್ಪತ್ರೆಗೆ ಬರುವ ರೋಗಿಗಳ ಚಿಕಿತ್ಸೆಗೆ ಮುಂಜಾಗ್ರತೆ ಕ್ರಮವಾಗಿ ಕಾಯಂ ನೌಕರರನ್ನು ನೇಮಿಸಲಾಗಿತ್ತಾದರೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net