ಆರೇ ತಿಂಗಳಲ್ಲಿ ಹಳ್ಳಹಿಡಿದ ಸಿಸಿ ರಸ್ತೆ!

1Naregal1
Published on

ನರೇಗಲ್ಲ: ಈ ರಸ್ತೆ ನಿರ್ವಿುಸಿ ಇನ್ನೂ ಆರು ತಿಂಗಳು ಕಳೆದಿಲ್ಲ, ಆಗಲೇ ಬಿರುಕು ಬಿಟ್ಟಿದೆ. ಕೆಲವೆಡೆ ಬರೀ ಕಲ್ಲುಗಳು ಕಾಣಿಸುತ್ತಿವೆ. ಕೆಲವೆಡೆ ರಸ್ತೆ ಕುಸಿಯುವ ಮೂಲಕ ಕಾಮಗಾರಿಯ ಅಸಲಿ ಮುಖ ಅನಾವರಣಗೊಂಡಿದೆ.

ನರೇಗಲ್ಲ ಪಟ್ಟಣದಿಂದ ಗದಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯ 2 ಕೋಟಿ ರೂ. ಅನುದಾನದಲ್ಲಿ ನಿರ್ವಿುಸಿದ 1.5 ಕಿ.ಮೀ. ಸಿಸಿ ರಸ್ತೆ ಈಗಾಗಲೇ ಕಿತ್ತು ಹೋಗಿದೆ. ಇದನ್ನು ಮನಗಂಡು ಇಲಾಖೆಯ ಅಧಿಕಾರಿಗಳು ಕಿತ್ತಿಹೋದ ರಸ್ತೆಗೆ ಡಾಂಬರ್ ಲೇಪನ ಮಾಡುವ ಮೂಲಕ ಕಳಪೆ ಕಾಮಗಾರಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಕಾಮಗಾರಿ ವೇಳೆ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಹೀಗಾಗಿ ರಸ್ತೆ ಬಹುಬೇಗನೆ ದುಸ್ಥಿತಿಗೆ ತಲುಪಿದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಇಲ್ಲಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಇಂತಹ ಪ್ರಮುಖ ರಸ್ತೆಯ ಕಾಮಗಾರಿ ಇಷ್ಟು ಬೇಗ ಕಿತ್ತು ಹೋದರೆ ಇತರೆ ರಸ್ತೆಗಳ ಗತಿ ಏನು? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ

ಡಾಂಬರ್ ರಸ್ತೆ ಬೇಗ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಸಿಸಿ ರಸ್ತೆ ಕಾಮಗಾರಿಗೆ ಆದ್ಯತೆ ನೀಡುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಹೇಳೋರು, ಕೇಳೋರು ಯಾರು ಇಲ್ಲವೆಂದು ಗುತ್ತಿಗೆದಾರರು ತಮ್ಮ ಮನಸೋ ಇಚ್ಛೆಯಂತೆ ಕಾಮಗಾರಿ ಮಾಡಿದ್ದಾರೆ. ಕೋಟ್ಯಂತರ ರೂ. ಅನುದಾನದ ಸಿಸಿ ರಸ್ತೆ ಕಾಮಗಾರಿ ಹಳ್ಳ ಹಿಡಿಯುವಂತೆ ಮಾಡಿದ್ದಾರೆ.

ನರೇಗಲ್ಲ-ಕೋಟುಮಚಗಿ ರಸ್ತೆ ಕಳಪೆ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಾಸಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸದೆ ಮೌನಕ್ಕೆ ಶರಣಾಗಿದ್ದಾರೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ಕೈಗೊಳ್ಳಲಾಗುತ್ತದೆ. | ವಿದ್ಯಾಧರ ದೊಡ್ಡಮನಿ, ಗದಗ ತಾ.ಪಂ. ಅಧ್ಯಕ್ಷ ನರೇಗಲ್ಲ-ಕೋಟುಮಚಗಿ ರಸ್ತೆ ಪದೇ ಪದೆ ಕಿತ್ತು ಹೋಗುತ್ತಿತ್ತು. ಆದ್ದರಿಂದ 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ವಿುಸಲಾಗಿದೆ. ಆದರೆ, 60 ಮೀ.ನಷ್ಟು ರಸ್ತೆ ಹದಗೆಟ್ಟಿರುವ ಬಗ್ಗೆ ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಹದಗೆಟ್ಟಿರುವ ರಸ್ತೆಯನ್ನು ಪುನಃ ನಿರ್ಮಾಣ ಮಾಡಲು ಸೂಚಿಸಲಾಗಿದೆ. | ಈರಪ್ಪ ಹೂಸೂರ, ಎಇಇ ಲೋಕೋಪಯೋಗಿ ಇಲಾಖೆ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net