ಆರೆಸ್ಸೆಸ್ ದೇಶ ಸೇವೆ ಅವರ್ಣನೀಯ

Photo
Published on

ಬೀದರ್: ದೇಶಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದೇಶ ಸೇವೆ, ತ್ಯಾಗ ಅವರ್ಣನೀಯ. ಸಂಘದ ಬಹುಮುಖಿ ಸೇವೆಗಳಿಗೆ ಬೆಲೆ ಕಟ್ಟಲಾಗದು ಎಂದು ಬೇಮಳಖೇಡ ಹಿರೇಮಠ,ನೌಬಾದ್ ಜ್ಞಾನ ಶಿವಯೋಗಾಶ್ರಮದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಜನವಾಡದ ಶ್ರೀ ಸಿದ್ಧಲಿಂಗೇಶ್ವರ ಚಿದ್ರಿ ಮಠದಲ್ಲಿ ಆರೆಸ್ಸೆಸ್ ನಿಂದ ಆಯೋಜಿಸಿದ ಕಾರ್ತಿಕ ದೀಪ ಪೂಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘದವರ ಕೆಲಸಕ್ಕೆ ಇಡೀ ದೇಶ ಹೆಮ್ಮೆಪಡುತ್ತದೆ. ಸಂಘದ ಸೇವಾ ಕಾರ್ಯಕರ್ತರನ್ನು ನಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳಬೇಕು. ಸಂಘವನ್ನು ಬಿಟ್ಟು ದೇಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಿದರು.

ಭಾರತದ ಹಿಂದು ಧರ್ಮ ಪ್ರಪಂಚದ ಎಲ್ಲ ಧರ್ಮಗಳನ್ನು ಗೌರವಿಸಿ ಬೆಳೆಸಿದ ಮಹಾನತೆ ಹೊಂದಿದೆ. ಆ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬರುತ್ತಿದೆ. ಮೊದಲು ದೇಶ ನಂತರ ನಾವು ಎಂಬ ಧ್ಯೇಯಕ್ಕೆ ಆದ್ಯತೆ ಕೊಡಬೇಕು. ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಆರೆಸ್ಸೆಸ್ ಕಲಬುರಗಿ ವಿಭಾಗ ಸಂಪರ್ಕ ಪ್ರಮುಖ ಭಗುಸಿಂಗ್ ಜಾಧವ್ ಮಾತನಾಡಿ, ಹಿಂದು ಧರ್ಮ ಹಾಗೂ ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಯುವ ಪೀಳಿಗೆಗೆ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಬೇಕು. ಪಾಶ್ಚಾತ್ಯ ಸಂಸ್ಕೃತಿಯಿಂದ ದೂರ ಇರಬೇಕು. ಸಂಘದ ಶಾಖೆಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವ ಪ್ರಶಿಕ್ಷಣ ನೀಡಲಾಗುತ್ತಿದೆ. ಉತ್ತಮ ವ್ಯಕ್ತಿತ್ವ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಸಂಘ ಶಾಖೆಗೆ ಬರಬೇಕು. ವ್ಯಕ್ತಿ ನಿರ್ಮಾಣ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ಸಂಘ ಮಾಡುತ್ತಿದೆ ಎಂದರು.

ಪ್ರಮುಖರಾದ ಹಣಮಂತರಾವ ಪಾಪಡೆ, ಶಿವರಾಜ ಪಾಟೀಲ್, ಸೂರಜಸಿಂಗ್ ಠಾಕೂರ್, ಸಚಿನ್ ಸ್ವಾಮಿ, ದತ್ತಾತ್ರಿ ಬಾವಗೆ , ಬೀದರ್ ಗ್ರಾಮಾಂತರ ತಾಲೂಕು ಕಾರ್ಯವಾಹ ವೀರೇಶ ಶೀಲವಂತ ಇತರರಿದ್ದರು. ಬಸಯ್ಯಾ ಸ್ವಾಮಿ ಚಿದ್ರಿಮಠ ಸ್ವಾಗತಿಸಿದರು. ಸೂರ್ಯಕಾಂತ ರೂಪನರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net