ಆರು ವೈದ್ಯಕೀಯ ಕಾಲೇಜು ಸ್ಥಾಪನೆ: ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್

SharanaPrakash patil
Published on

ಮೈಸೂರು: ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಕೇರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬುದು ಸರ್ಕಾರದ ಗುರಿಯಾಗಿದೆ ಎಂದು ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು

ಅದಕ್ಕಾಗಿ ಪಿಪಿಪಿ ಮಾದರಿಯಲ್ಲಿ 6 ಹೊಸ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ. 3,900 ಮೆರಿಟ್ ಸೀಟುಗಳು ಲಭ್ಯವಿವೆ. ಪ್ರತಿ ಜಿಲ್ಲೆಯಲ್ಲೂ ರಾಜ್ಯ ಕೋಟಾ ಅಡಿಯಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಯತ್ನಿಸುತ್ತಿದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ವೈದ್ಯಕೀಯ ಸೀಟುಗಳು ದೊರೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಯುವನಿಧಿ ಪಡೆಯುವವರೆಲ್ಲ ತರಬೇತಿಗೆ ಬರುತ್ತಿಲ್ಲ

ಯುವನಿಧಿಯ ಹಣ ಪಡೆಯುವವರೆಲ್ಲ ತರಬೇತಿಗೆ ಬರುತ್ತಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಬೇಸರವ್ಯಕ್ತಪಡಿಸಿದರು.

ಯುವನಿಧಿ ಯೋಜನೆಗೆ 2.77 ಲಕ್ಷ ಯುವಕರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೌಶಲ ತರಬೇತಿಗೆ 1500 ಜನ ಮಾತ್ರ ಹಾಜರಾಗಿದ್ದಾರೆ. ಕೌಶಲ ತರಬೇತಿ ಪಡೆದರೆ ಸರ್ಕಾರ ಪದವೀಧರರಿಗೆ ನೀಡುವ ಯುವನಿಧಿ ಹಣ ಸ್ಥಗಿತ ಆಗುತ್ತದೆ ಎಂಬ ತಪ್ಪು ಭಾವನೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಹಣ ಬಂದ್ ಆಗುವುದಿಲ್ಲ. ನೋಂದಣಿ ಆದವರಿಗೆ ಮುಂದಿನ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೂ ಹಣ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಯುವಕರಿಗೆ ಕೌಶಲ ತರಬೇತಿ ನೀಡಲು ಇಲಾಖೆಯಿಂದ ಹಲವು ಯೋಜನೆ ಅನುಷ್ಠಾನದಲ್ಲಿ ಇದೆ. ಯುವನಿಧಿ ಪ್ಲಸ್ ಯೋಜನೆ ಅವುಗಳಲ್ಲಿ ಒಂದು ಆಗಿದೆ.

ಈ ಸಾಲಿನಲ್ಲಿ 25 ಸಾವಿರ ಜನರಿಗೆ ಕೌಶಲ ತರಬೇತಿ ನೀಡುವ ಗುರಿ ಇದ್ದು, ಕಲಬುರಗಿ, ಕೊಪ್ಪಳ ಹಾಗೂ ಮೈಸೂರಿನ ವರುಣದಲ್ಲಿ ಬಹುಕೌಶಲ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net